
ಸಂಗ್ರಹ ಚಿತ್ರ
ರಿಯಾದ್(ಸೌದಿ ಅರೇಬಿಯಾ): 30 ವರ್ಷಗಳಿಂದ ಶೌಚಾಲಯಗಳಲ್ಲಿ ಸಮೋಸಾ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಸೌದಿ ಅರೇಬಿಯಾ ಜೆಡ್ಡಾ ನಗರದಲ್ಲಿ ಟಾಯ್ಲೆಟ್ ನಲ್ಲಿ ಸಮೋಸಾ ತಯಾರಿಸುತ್ತಿರುವುದನ್ನ ಪತ್ತೆ ಹಚ್ಚಿದ ನಂತರ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಸುಮಾರು ಮೂರು ದಶಕಗಳಿಂದ ಈ ರೀತಿ ಆಹಾರ ತಯಾರಿಸುತ್ತಿರುವ ಬಗ್ಗೆ ಸುಳಿವು ಪಡೆದ ನಂತರ ಜೆಡ್ಡಾ ಮುನ್ಸಿಪಾಲಿಟಿ ವಸತಿ ಕಟ್ಟಡದಲ್ಲಿರುವ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿತು.
ವರದಿಯ ಪ್ರಕಾರ, ರೆಸ್ಟೋರೆಂಟ್ ವಾಶ್ ರೂಂನಲ್ಲಿ ತಿಂಡಿ ಮತ್ತು ಊಟವನ್ನು ಸಹ ತಯಾರಿಸುತ್ತಿತ್ತು.ಮಾಂಸ ಮತ್ತು ಚೀಸ್‌ನಂತಹ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜೆಡ್ಡಾ ಮುನ್ಸಿಪಾಲಿಟಿ ಅಧಿಕಾರಿಗಳು ಉಪಾಹಾರಗೃಹದಲ್ಲಿ ಪತ್ತೆ ಮಾಡಿದ್ದಾರೆ.
ಕೆಲಸಗಾರರು ಯಾವುದೇ ಆರೋಗ್ಯ ಕಾರ್ಡ್‌ಗಳನ್ನು ಹೊಂದಿಲ್ಲದೇ ಇರುವುದು ಗೊತ್ತಾಗಿದೆ. ಮತ್ತು ರೆಸ್ಟೋರೆಂಟ್ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಈಗ ಉಪಾಹಾರ ಗೃಹವನ್ನು ಮುಚ್ಚಲಾಗಿದೆ.
ಏತನ್ಮಧ್ಯೆ, ಸೌದಿ ಅರೇಬಿಯಾದಲ್ಲಿ ಅನೈರ್ಮಲ್ಯಕ್ಕಾಗಿ ರೆಸ್ಟೋರೆಂಟ್ ಅನ್ನು ಮುಚ್ಚಿರುವುದು ಇದೇ ಮೊದಲಲ್ಲ. ಜನವರಿಯಲ್ಲಿ, ಜೆಡ್ಡಾದಲ್ಲಿನ ಪ್ರಸಿದ್ಧ ಷಾವರ್ಮಾ ರೆಸ್ಟೋರೆಂಟ್ ಅನ್ನು ಸಹ ಮುಚ್ಚಲಾಯಿತು.