ಫೋರ್ಬ್ಸ್ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿ 6 ಭಾರತೀಯರು
ಫೋರ್ಬ್ಸ್ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಆರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ.
Published: 07th December 2022 07:42 PM | Last Updated: 07th December 2022 08:04 PM | A+A A-

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನ್ಯೂಯಾರ್ಕ್: ಫೋರ್ಬ್ಸ್ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಆರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ 100 ಪ್ರಭಾವಿ ಮಹಿಳೆಯರ ವಾರ್ಷಿಕ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು 36ನೇ ಸ್ಥಾನ ಪಡೆದಿದ್ದಾರೆ. ಸೀತಾರಾಮನ್ ಅವರು ಸತತ ನಾಲ್ಕನೇ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 2021 ರಲ್ಲಿ ಕೇಂದ್ರ ಸಚಿವೆ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿದ್ದರೆ, 2020 ರಲ್ಲಿ 41ನೇ ಸ್ಥಾನ ಮತ್ತು 2019ರಲ್ಲಿ 34ನೇ ಸ್ಥಾನದಲ್ಲಿದ್ದರು.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ(72ನೇ ಸ್ಥಾನ), ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್(88ನೇ ಸ್ಥಾನ), ಎಚ್‌ಸಿಎಲ್ ಕಾರ್ಪೊರೇಶನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಶನಿ ನಾಡರ್ ಮಲ್ಹೋತ್ರಾ(53), ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ (54ನೇ ಸ್ಥಾನ), ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ (67ನೇ ಸ್ಥಾನ) ಸ್ಥಾನ ಪಡೆದಿದ್ದಾರೆ.
ಇದನ್ನು ಓದಿ: ಫೋರ್ಬ್ಸ್ ಪಟ್ಟಿ: 20 ಏಷ್ಯನ್ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ಉದ್ಯಮಿಗಳಿಗೆ ಸ್ಥಾನ
ಉಕ್ರೇನ್ ಯುದ್ಧದ ಸಮಯದಲ್ಲಿ ಅವರ ನಾಯಕತ್ವಕ್ಕಾಗಿ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಭಾಯಿಸಿದ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಇನ್ನು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟೀನ್ ಲಾಗಾರ್ಡ್ ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನವನ್ನು ಅಮೆರಿಕದ ಚುನಾಯಿತ ಉಪಾಧ್ಯಕ್ಷೆ ಭಾರತ ಮೂಲದ ಕಮಲಾ ಹ್ಯಾರಿಸ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.