ನೇಪಾಳ ನೂತನ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಪ್ರಮಾಣ ವಚನ ಸ್ವೀಕಾರ

ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಸೋಮವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ 'ಪ್ರಚಂಡ' ಅವರು ಮೂರನೇ ಬಾರಿ ನೇಪಾಳ...
ಪುಷ್ಪ ಕಮಲ್ ದಹಾಲ್
ಪುಷ್ಪ ಕಮಲ್ ದಹಾಲ್

ಕಠ್ಮಂಡು: ಸಿಪಿಎನ್-ಮಾವೋವಾದಿ ಸೆಂಟರ್(ಸಿಪಿಎನ್-ಎಂಸಿ) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು ಸೋಮವಾರ ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ 'ಪ್ರಚಂಡ' ಅವರು ಮೂರನೇ ಬಾರಿ ನೇಪಾಳ ಪ್ರಧಾನಿ ಗದ್ದುಗೆ ಏರಿದರು.

ಇಂದು ಶೀತಲ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಪ್ರಚಂಡ ಅವರಿಗೆ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ ನೂತನ ಸಮ್ಮಿಶ್ರ ಸರ್ಕಾರದ ಇತರ ಸಂಪುಟ ಸದಸ್ಯರಿಗೂ ಅಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 169 ಸದಸ್ಯರ ಬೆಂಬಲ ಹೊಂದಿರುವ ಪತ್ರವನ್ನು ನೇಪಾಳ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರಿಗೆ ಸಲ್ಲಿಸಿದ ನಂತರ 68 ವರ್ಷದ 'ಪ್ರಚಂಡ' ಅವರನ್ನು ಭಾನುವಾರ ದೇಶದ ನೂತನ ಪ್ರಧಾನಿಯಾಗಿ ನೇಮಿಕ ಮಾಡಿದ್ದರು.

ಹೊಸ ಕ್ಯಾಬಿನೆಟ್ ಮೂರು ಉಪ ಪ್ರಧಾನಿಯನ್ನು ಹೊಂದಿದ್ದು, CPN-UMLನಿಂದ ಬಿಷ್ಣು ಪೌಡೆಲ್, CPN-ಮಾವೋವಾದಿ ಸೆಂಟರ್ ನಿಂದ ನಾರಾಯಣ ಕಾಜಿ ಶ್ರೇಷ್ಠ ಮತ್ತು ರಾಷ್ಟ್ರೀಯ ಸ್ವತಂತ್ರ ಪಕ್ಷ(RSP)ದಿಂದ ರಬಿ ಲಮಿಚಾನೆ ಅವರು ಉಪ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ನೇಪಾಳಿ ಕಾಂಗ್ರೆಸ್ ಪಕ್ಷ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿದ್ದರೂ ಸಹ ಅಧ್ಯಕ್ಷರು ನೀಡಿದ ಗಡುವಿನೊಳಗೆ ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಈಗಿನ ನೂತನ ಸರ್ಕಾರದಲ್ಲಿ ಮೊದಲ ಎರಡೂವರೆ ವರ್ಷದ ಅವಧಿಗೆ ಸಿಪಿಎನ್-ಮಾವೋವಾದಿ ಸೆಂಟರ್ ನ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಪ್ರಧಾನಿಯಾಗಿದ್ದು, ಉಳಿದ ಎರಡೂವರೆ ವರ್ಷಕ್ಕೆ ಸಿಪಿಎನ್-ಯುಎಂಎಲ್ ಪಕ್ಷದ ಅಧ್ಯಕ್ಷ ಕೆ.ಪಿ ಶರ್ಮಾ ಓಲಿಯವರು ಪ್ರಧಾನಿಯಾಗಲಿದ್ದಾರೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com