ಪಾಕಿಸ್ತಾನ: ಸುಪ್ರೀಂ ಕೋರ್ಟ್ ನ ಮೊಟ್ಟ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೇಷಾ ಮಲಿಕ್ ನೇಮಕ
ಲಾಹೋರ್ ಹೈಕೋರ್ಟ್ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿ ಆಯ್ಕೆಮಾಡಲಾಗಿದೆ.
Published: 07th January 2022 01:27 PM | Last Updated: 07th January 2022 02:23 PM | A+A A-

ಆಯೇಷಾ ಮಲಿಕ್
ಇಸ್ಲಮಾಬಾದ್: ಲಾಹೋರ್ ಹೈಕೋರ್ಟ್ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿ ಆಯ್ಕೆಮಾಡಲಾಗಿದೆ.
ಚೀಫ್ ಜಸ್ಟಿಸ್ ಗುಲ್ಜಾರ್ ಅಹ್ಮದ್ ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ನಾಲ್ವರ ವಿರುದ್ಧ ಐದು ಬಹುಮತಗಳಿಂದ ಗೆದ್ದ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ನ್ಯಾಯಾಮೂರ್ತಿಯಾಗಿ ನೇಮಕಗೊಳಿಸಲು ಅನುಮೋದಿಸಿದೆ.
ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರ ಬಡ್ತಿಗೆ ಸಂಬಂಧಿಸಿದಂತೆ ಜೆಸಿಪಿ ಸಭೆ ನಡೆಸುತ್ತಿರುವ ಎರಡನೇ ಬಾರಿ ಸಭೆ ಇದಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 9 ರಂದು ಮೊದಲ ಬಾರಿಗೆ ಆಯಿಷಾ ಮಲಿಕ್ ಅವರ ಹೆಸರು ಕೇಳಿಬಂದಿತ್ತು. ಆ ವೇಳೆ ನಾಲ್ವರ ವಿರುದ್ಧ ನಾಲ್ಕು ಅಂದರೆ ಸಮಾನ ಮತಗಳನ್ನು ಪಡೆದಿದ್ದ ಕಾರಣ ಅವರ ಹೆಸರನ್ನು ನಿರಾಕರಿಸಲಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನ ಹೇಡಿಗಳ ದೇಶ: ಪ್ರಧಾನಿ ಇಮ್ರಾನ್ ಖಾನ್ ವಿರುದ್ದ ಮಾಜಿ ಪತ್ನಿ ವಾಗ್ದಾಳಿ
ಜ್ಯೇಷ್ಠತೆಯ ಆಧಾರದಲ್ಲಿ ಆಯಿಷಾ ಮಲಿಕ್ ಅವರನ್ನು ನೇಮಕಗೊಳಿಸಿದ್ದಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಅಫ್ರಿದಿ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದರು.
ನ್ಯಾಯಮೂರ್ತಿ ಆಯಿಷಾ ಮಲಿಕ್ ದೇಶದ ಐದು ಹೈಕೋರ್ಟ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ನ್ಯಾಯಾಧೀಶರಿಗಿಂತ ಕಿರಿಯರು ಎಂದು ಅಫ್ರಿದಿ ಮಾಧ್ಯಮಗಳಿಗೆ ತಿಳಿಸಿದ್ದರು. ಅಲ್ಲದೇ ಆಯಿಷಾ ಮಲಿಕ್ ಅವರ ಹೆಸರನ್ನು ಆಯ್ಕೆಮಾಡಿದ್ದಕ್ಕೆ ಕೋರ್ಟ್ ಕಲಾಪ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಜೆಸಿಪಿ ಅನುಮೋದನೆ ಬಳಿಕ ಆಯಿಷಾ ಅವರ ಹೆಸರನ್ನು ಸಂಸದೀಯ ಸಮಿತಿ ಪರಿಗಣಿಸಲಿದೆ. ಸಾಮಾನ್ಯವಾಗಿ ಜೆಸಿಪಿ ಶಿಫಾರಸ್ಸಿನ ವಿರುದ್ಧ ಸಂಸದೀಯ ಸಮಿತಿ ನಿರ್ಧಾರ ಕೈಗೊಳ್ಳುವುದಿಲ್ಲ.