‘ಸಂಕಷ್ಟದಲ್ಲಿದ್ದೇವೆ ಸಹಾಯ ಮಾಡಿ...’: ಕೊನೆಗೂ ವಿಶ್ವದ ಮುಂದೆ ಅಂಗಲಾಚಿದ ತಾಲಿಬಾನಿ ನಾಯಕರು
ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಆ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ‘ಆರ್ಟಿಎ’ ಪ್ರಸಾರ ಮಾಡಿದೆ.
Published: 08th January 2022 01:24 PM | Last Updated: 08th January 2022 02:18 PM | A+A A-

ತಾಲಿಬಾನ್ ಉಪ ಪ್ರಧಾನಿ ಮುಲ್ಲಾ ಬರಾದರ್
ಕಾಬೂಲ್: ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಕ್ರಮಣಕಾರಿಯಾಗಿ ಆಡಳಿತಕ್ಕೇರಿದ್ದ ತಾಲಿಬಾನ್ ನಾಯಕರು ಇದೀಗ ಆಡಳಿತ ಬಿಕ್ಕಟ್ಟಿಗೆ ಸಿಲುಕಿದ್ದು ತಮಗೆ ನೆರವು ನೀಡುವಂತೆ ವಿಶ್ವದ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ಆ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ‘ಆರ್ಟಿಎ’ ಪ್ರಸಾರ ಮಾಡಿದೆ.
ಹೌದು.. ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ತಮ್ಮ ರಾಜಕೀಯ ಸಮಸ್ಯೆಯನ್ನೂ ಮೀರಿ ಸಹಾಯ ಹಸ್ತ ಚಾಚಬೇಕು ಎಂದು ತಾಲಿಬಾನ್ ನಾಯಕ ಮುಲ್ಲಾ ಬರಾದರ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ತಾಲಿಬಾನ್ನ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, 'ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದೆ ಎಂದು ಹೇಳಿದ್ದಾರೆ.
‘ಅಫ್ಘಾನಿಸ್ತಾನ ಒಂದು ಕಡೆ ನಿರ್ಬಂಧಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಕಳೆದ 20 ವರ್ಷಗಳ ಆಡಳಿತ ದೇಶದಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಯಾವುದೇ ಮೂಲಸೌಕರ್ಯ ಸೃಷ್ಟಿ ಮಾಡಿಲ್ಲ. ದೇಶದ ನಾಗರಿಕರಿಗೆ ಹಣ, ವಸತಿ ಮತ್ತು ಆಹಾರದ ತೀವ್ರ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಅಫ್ಗನ್ನರಿಗೆ ವಿಶ್ವ ರಾಷ್ಟ್ರಗಳಿಂದ ಮಾನವೀಯ ಸಹಾಯದ ತುರ್ತು ಎದುರಾಗಿದೆ,’ ಮುಲ್ಲಾ ಬರದಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಡ್ಯುರಾಂಡ್ ಗಡಿ ಬೇಲಿ: ಪಾಕ್-ಆಫ್ಘಾನ್ ದ್ವೇಷ ಉಲ್ಬಣ; ಬೇಲಿ ಕೀಳುತ್ತಿರುವ ತಾಲಿಬಾನ್ ಯೋಧರು, ಪಾಕ್ ಗೆ ಮುಖಭಂಗ!
ತುರ್ತು ಪರಿಸ್ಥಿತಿ ಎದುರಾದರೂ ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದ ಬರಾದರ್, ಇದೇ ವೇಳೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ. ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ವಾರದ ಹಿಂದೆ, ನೈಸರ್ಗಿಕ ವಿಕೋಪದ ಕಾರಣಕ್ಕಾಗಿ ಅಫ್ಗಾನಿಸ್ತಾನವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಅಲ್ಲಿ ವಿಪರೀತ ಹಿಮ ಮತ್ತು ಮಳೆ ಸುರಿಯುತ್ತಿದ್ದು, ದೇಶದ ಪ್ರಮುಖ ರಸ್ತೆಗಳು ಬಂದ್ ಆಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಈ ವರೆಗೂ ಆಡಳಿತಾತ್ಮಕ ವಿಚಾರದಲ್ಲಿ ತಾಲಿಬಾನ್ ಮುಖಂಡರು ಪ್ರತಿನಿತ್ಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ನೈಸರ್ಗಿಕ ವಿಕೋಪ ಆಫ್ಘಾನಿಸ್ತಾನದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.