ಕೊರೋನಾ ಹೊಸ ರೂಪಾಂತರಿ 'ಓಮಿಕ್ರಾನ್' ಎಂಡೆಮಿಕ್ ಎಂದು ಪರಿಗಣಿಸಲು ಸಾಧ್ಯವಿಲ್ಲ: ಡಬ್ಲ್ಯೂಎಚ್ಓ ಎಚ್ಚರಿಕೆ
ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಓಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
Published: 14th January 2022 08:41 PM | Last Updated: 14th January 2022 08:41 PM | A+A A-

ಓಮಿಕ್ರಾನ್ ಕೋವಿಡ್ ವೈರಸ್-WHO
ಜಿನಿವಾ: ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಓಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ನಿಂದಾಗಿ ಜಾಗತಿಕವಾಗಿ ಕೋವಿಡ್ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಡೆಲ್ಟಾಗಿಂತಲೂ ಓಮಿಕ್ರಾನ್ ಬಹಳ ವೇಗವಾಗಿ ಹರಡುತ್ತಿದ್ದು, ಇದನ್ನು ಎಂಡೆಮಿಕ್ ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ ಡಬ್ಲ್ಯೂಎಚ್ಒ ಹೇಳಿದೆ.
ಕೊರೊನಾ ವೈರಸ್ ಸೋಂಕಿನ ಪ್ರಮಾಣ ಜಾಗತಿಕವಾಗಿ ತೀವ್ರ ಸ್ವರೂಪದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಮಿಕ್ರಾನ್ ವೈರಸ್ ಅನ್ನು ಸೋಂಕು ಕೊನೆಯಾಗುವ ಲಕ್ಷಣ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕಳೆದ ಒಂದು ವಾರದಲ್ಲಿ ಈಗಾಗಲೇ 15 ದಶಲಕ್ಷ ಕೊರೊನಾ ಪ್ರಕರಣಗಳು ಜಾಗತಿಕವಾಗಿ ದೃಢಪಟ್ಟಿದ್ದು, ಲೆಕ್ಕಕ್ಕೇ ಸಿಗದ ಕೋಟ್ಯಂತರ ಪ್ರಕರಣಗಳು ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡೆಲ್ಟಾಗಿಂತಲೂ ಓಮಿಕ್ರಾನ್ ಅಷ್ಟೇನೂ ಅಪಾಯಕಾರಿ ಅಲ್ಲವಾದರೂ ಈ ರೂಪಾಂತರಿಯ ಅಪಾಯ ಇದ್ದೇ ಇದೆ. ಕೊರೊನಾ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಸ್ವರೂಪದ ರೋಗ ಲಕ್ಷಣ ಹೊಂದಿರುವುದಿಲ್ಲ, ಇನ್ನು ಸಾವಿನ ಪ್ರಮಾಣ ಕೂಡಾ ಡೆಲ್ಟಾಗೆ ಹೋಲಿಸಿದರೆ ಕಡಿಮೆ ಎಂದು ಹೇಳಬಹುದಾಗಿದೆ. ಆದರೆ, ಲಸಿಕೆ ಪಡೆಯದವರು ಸೋಂಕನ್ನು ಹರಡುವ ಸಾಧ್ಯತೆ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.