
ಸ್ಫೋಟದ ನಂತರದ ದೃಶ್ಯ
ಅಕ್ರಾ(ಘಾನಾ): ಪಶ್ಚಿಮ ಆಫ್ರಿಕಾದ ಘಾನಾ ದೇಶದ ರಾಜಧಾನಿ ಅಕ್ರಾದಲ್ಲಿ ಕಳೆದ ರಾತ್ರಿ ಉಂಟಾದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು 59 ಮಂದಿ ಗಾಯಗೊಂಡಿದ್ದಾರೆ.
ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್ ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಸರ್ಕಾರ ಹೇಳಿದೆ. ಸ್ಫೋಟದಿಂದಾಗಿ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು ಕೆಲವು ಧರೆಗುರುಳಿದೆ. ರಾಜಧಾನಿ ಅಕ್ರಾದಿಂದ 300 ಕಿಲೋ ಮೀಟರ್ ದೂರದಲ್ಲಿ ಬೊಗೊಸೊ ಎಂಬ ನಗರದ ಹತ್ತಿರ ಈ ದುರಂತ ಸಂಭವಿಸಿದೆ.
ಸ್ಫೋಟದಿಂದ ದಟ್ಟ ಹೊಗೆ ಹೊರಸೂಸಿದ್ದು ಸ್ಥಳೀಯರು ಉಸಿರುಗಟ್ಟುವ ವಾತಾವರಣದಲ್ಲಿ ಹೊರಗೆ ಓಡುತ್ತಿದ್ದಾರೆ. ದಟ್ಟ ಕಾರ್ಮೋಡ ಕವಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆ ಸಿಬ್ಬಂದಿಗೆ ಬದುಕುಳಿದವರನ್ನು ಹೊರಗೆ ತರುವುದು ಕಷ್ಟಕರವಾಗಿತ್ತು.
ಇದುವರೆಗೆ 17 ಮಂದಿ ಮೃತರಾಗಿರುವುದು ದೃಢಪಟ್ಟಿದೆ. ಗಾಯಗೊಂಡ 59 ಮಂದಿಯನ್ನು ಕಾಪಾಡಲಾಗಿದೆ ಎಂದು ಘಾನಾ ಸರ್ಕಾರದ ಮಾಹಿತಿ ಸಚಿವ ಕೊಜೊ ಒಪ್ಪೊಂಗ್ ಕ್ರುಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗೆ ಟ್ರಕ್ ನಲ್ಲಿ ಸ್ಫೋಟಕವನ್ನು ಹೊತ್ತೊಯ್ಯುತ್ತಿರುವಾಗ ಬೈಕ್ ಮತ್ತು ಇನ್ನೊಂದು ವಾಹನಕ್ಕೆ ವಿದ್ಯುತ್ ಪ್ರವಾಹಕ ಹತ್ತಿರ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ಗಾಯಗೊಂಡ 59 ಮಂದಿಯಲ್ಲಿ 42 ಮಂದಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಘಾನಾ ಅಧ್ಯಕ್ಷ ನಾನ ಅಕುಫೊೃ-ಅಡ್ಡೊ ಈ ದುರ್ಘಟನೆಯನ್ನು ತೀರಾ ದುರದೃಷ್ಟಕರ ಮತ್ತು ದುರಂತ ಎಂದು ಬಣ್ಣಿಸಿದ್ದಾರೆ.