ಅಮೆರಿಕಾ- ಕೆನಡಾ ಗಡಿಯಲ್ಲಿ ಮೈ ಕೊರೆಯುವ ಚಳಿ: ಮಗು ಸೇರಿ ನಾಲ್ವರು ಭಾರತೀಯರ ಸಾವು; ಭಾರತ ಕಳವಳ
ರಕ್ತ ಹೆಪ್ಪುಗಟ್ಟುವಂತಹ ಚಳಿ. ಮೈನಸ್ 36 ಡಿಗ್ರಿ ಸೆಲ್ಸಿಯಸ್ ತಾಪಮಾನ, ಎಲ್ಲೆಲ್ಲೂ ಹಿಮ .. ಜೊತೆಗೆ ಭಾರಿ ಹಿಮಪಾತ, ಇಂತಹ ಭೀಕರ ವಾತಾವರಣದಲ್ಲಿ ಕೆನಡಾದಿಂದ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ಮಗು ಸೇರಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಪ್ರಯತ್ನ ನಡೆಸಿದ್ದು, ಈ ವೇಳೆ ರಕ್ತ ಹೆಪ್ಪುಗಟ್ಟಿ ನಾಲ್ವರೂ ಸಾವನ್ನಪ್ಪಿರುವ ಘಟನೆ...
Published: 22nd January 2022 11:37 AM | Last Updated: 22nd January 2022 01:19 PM | A+A A-

ಸಂಗ್ರಹ ಚಿತ್ರ
ನ್ಯೂಯಾರ್ಕ್: ರಕ್ತ ಹೆಪ್ಪುಗಟ್ಟುವಂತಹ ಚಳಿ. ಮೈನಸ್ 36 ಡಿಗ್ರಿ ಸೆಲ್ಸಿಯಸ್ ತಾಪಮಾನ, ಎಲ್ಲೆಲ್ಲೂ ಹಿಮ .. ಜೊತೆಗೆ ಭಾರಿ ಹಿಮಪಾತ, ಇಂತಹ ಭೀಕರ ವಾತಾವರಣದಲ್ಲಿ ಕೆನಡಾದಿಂದ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ಮಗು ಸೇರಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಪ್ರಯತ್ನ ನಡೆಸಿದ್ದು, ಈ ವೇಳೆ ರಕ್ತ ಹೆಪ್ಪುಗಟ್ಟಿ ನಾಲ್ವರೂ ಸಾವನ್ನಪ್ಪಿರುವ ಘಟನೆ ಅಮೆರಿಕ, ಕೆನಡಾ ಗಡಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.
ಒಂದೇ ಕುಟುಂಬದ ಪತಿ, ಪತ್ನಿ ಒಂದು ಪುಟ್ಟ ಮಗು, ಹದಿಹರೆಯದ ಬಾಲಕ ಸಾವನ್ನಪ್ಪಿರುವವರಾಗಿದ್ದಾರೆ. ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಎಮರ್ಸನ್ ಗಡಿಯಲ್ಲಿ ಮಧ್ಯ ರಾತ್ರಿ ಅಮೆರಿಕಾ ಪ್ರವೇಶಿಸಲು ನಡೆಸಿದ ಯತ್ನದಲ್ಲಿ ತೀವ್ರ ಹವಾಮಾನ ಪರಿಸ್ಥಿತಿ ತಾಳಲಾರದೆ ನಾಲ್ವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಇವರೆಲ್ಲರೂ ಅಕ್ರಮವಾಗಿ ಅಮೆರಿಕಾ ಪ್ರವೇಶಿಸಲು ಪ್ರಯತ್ನಿಸಿ, ತೀವ್ರ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಮೃತ ದೇಹಗಳು ಗಡಿಯಿಂದ 40 ಅಡಿ ದೂರದಲ್ಲಿ ಹಿಮದಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ವಾತಾವರಣ: ಹತ್ತಿಕ್ಕಲು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಮೀಷನರ್ ಆಗ್ರಹ
ಇದಕ್ಕೂ ಮೊದಲು, ಅಮೆರಿಕಾ ಗಡಿ ಭಾಗದಲ್ಲಿ ಇಬ್ಬರು ಭಾರತೀಯರೊಂದಿಗೆ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದ ಸ್ಟೀವ್ ಸ್ಯಾಂಡ್ ಎಂಬ 47 ವರ್ಷದ ವ್ಯಕ್ತಿಯನ್ನು ಅಮೆರಿಕಾ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು. ಆ ವ್ಯಾನ್ನಲ್ಲಿ ದೊಡ್ಡ ಪ್ರಮಾಣದಲ್ಲಿ ತಿನಿಸುಗಳು, ಮತ್ತಿತರ ವಸ್ತುಗಳನ್ನು ಗುರುತಿಸಿದ ಅಮೆರಿಕಾ ಪಡೆಗಳು ಇನ್ನೂ ಹೆಚ್ಚಿನ ಮಂದಿ ಗಡಿ ದಾಟಬಹುದು ಎಂದು ಶಂಕಿಸಿ, ಜಾಗೃತೆ ವಹಿಸುವಂತೆ ಕೆನಡಾದ ಗಡಿ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಿತು,
ತಕ್ಷಣ ಕಾರ್ಯಪ್ರವೃತ್ತರಾದ ಕೆನಡಾದ ಗಡಿ ರಕ್ಷಣಾ ಪಡೆಗಳು ಹಿಮದಡಿಯಲ್ಲಿ ಬಿದ್ದಿದ್ದ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಗಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಹದಿನೈದು ಭಾರತೀಯರ ಗುರುತಿಸಿ ಅವರನ್ನು ವಿಚಾರಣೆ ನಡೆಸಲಾಯಿತು.
ಯಾವುದೇ ದಾಖಲೆಗಳಿಲ್ಲದೆ ತಮ್ಮನ್ನು ಅಮೆರಿಕಾಗೆ ಅಕ್ರಮವಾಗಿ ಸಾಗಿಸಲು ವ್ಯಕ್ತಿಯೊಬ್ಬರು ಒಪ್ಪಂದ ಮಾಡಿಕೊಂಡಿದ್ದರು ಎಂದು, ಅವರು ಕೆನಡಾದ ಗಡಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಗಡಿ ದಾಟಲು ಈ ಮಾರ್ಗ ತೋರಿಸಿದ್ದರು. ಗಡಿ ದಾಟಿದ ನಂತರ ನಮ್ಮನ್ನು ಕರದುಕೊಂಡು ಹೋಗುವುದಾಗಿ ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಮೆರಿಕಾ ಪಡೆಗಳು ಸ್ಟೀವ್ ಸ್ಯಾಂಡ್ ಭಾಗಿಯಾಗಿದ್ದಾನೆ ಎಂದು ಗುರುತಿಸಿ, ಆತನ ವಿರುದ್ಧ ಮಾನವ ಕಳ್ಳಸಾಗಣೆ ಅಡಿ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಕುವೈತ್: ಕೊಟ್ಯಂತರ ರೂ. ಕಂಪನಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕನ್ನಡಿಗ ನೌಕರ!
ಕಳವಳ ವ್ಯಕ್ತಪಡಿಸಿದ ವಿದೇಶಾಂಗ ಸಚಿವ
ನಾಲ್ವರು ಭಾರತೀಯರ ಕುಟುಂಬದ ಸಾವಿನ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಆಘಾತ ವ್ಯಕ್ತಪಡಿಸಿದ್ದಾರೆ.
ಕೆನಡಾದಲ್ಲಿ ಶಿಶು ಸೇರಿದಂತೆ 4 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿಯಿಂದ ಆಘಾತವಾಗಿದೆ. ಪರಿಸ್ಥಿತಿಗೆ ತುರ್ತಾಗಿ ಸ್ಪಂದಿಸುವಂತೆ ಅಮೆರಿಕ ಮತ್ತು ಕೆನಡಾದಲ್ಲಿರುವ ನಮ್ಮ ರಾಯಭಾರಿಗಳನ್ನು ಕೇಳಿದ್ದೇವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಜೈಶಂಕರ್ ಅವರು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ.
ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಟ್ವೀಟ್ ಮಾಡಿ, ಇದೊಂದು ದುರದೃಷ್ಟಕರ ಮತ್ತು ದುರಂತ ಘಟನೆ. ತನಿಖೆಯ ಕುರಿತು ನಾವು ಅಮಂರಿಕಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. @IndiainChicagoದ ದೂತಾವಾಸದ ತಂಡವು ಇಂದು ಮಿನ್ನೇಸೋಟಕ್ಕೆ ಪ್ರಯಾಣಿಸುತ್ತಿದೆ ಮತ್ತು ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.