56 ಭಾರತೀಯ ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಕೋರ್ಟ್ ಆದೇಶ
ದ್ವೀಪ ರಾಷ್ಟ್ರದ ಪ್ರಾದೇಶಿಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
Published: 25th January 2022 07:55 PM | Last Updated: 27th January 2022 01:32 PM | A+A A-

ಸಾಂದರ್ಭಿಕ ಚಿತ್ರ
ಕೊಲಂಬೋ: ದ್ವೀಪ ರಾಷ್ಟ್ರದ ಪ್ರಾದೇಶಿಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಡಿಸೆಂಬರ್ ಮಧ್ಯಭಾಗದಲ್ಲಿ ಮನ್ನಾರ್ ನ ದಕ್ಷಿಣ ಸಮುದ್ರದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಉತ್ತರ ಜಾಫ್ನಾ ಪರ್ಯಾಯ ದ್ವೀಪದ ನ್ಯಾಯಾಲಯವು ಆದೇಶಿಸಿದೆ.
56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ನ್ಯಾಯಾಲಯವು ಆದೇಶಿಸಿದೆ ಎಂದು ತಿಳಿದು ಸಂತೋಷವಾಗಿದೆ ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.
ಮಂಗಳವಾರ 56 ಮೀನುಗಾರರನ್ನು ಬಿಡುಗಡೆ ಮಾಡುವುದರೊಂದಿಗೆ ಶ್ರೀಲಂಕಾದ ವಶದಲ್ಲಿ ಯಾವುದೇ ಭಾರತೀಯ ಮೀನುಗಾರರು ಇರುವುದಿಲ್ಲ ಎಂದು ಶ್ರೀಲಂಕಾ ಅಧಿಕಾರಿಗಳು ಮತ್ತು ಭಾರತೀಯ ರಾಜತಾಂತ್ರಿಕ ಮೂಲಗಳು ದೃಢಪಡಿಸಿವೆ.
ಇದನ್ನು ಓದಿ: ಸಮುದ್ರ ಮಧ್ಯೆ ತಮಿಳುನಾಡು ಮೀನುಗಾರರ ದೋಣಿಯನ್ನು ಮುಳುಗಿಸಿ, ಓಡಿಸಿದ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ!
ಆರ್ಥಿಕ ನೆರವು ಮಾತುಕತೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಾನವೀಯ ಆಧಾರದ ಮೇಲೆ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಭಾರತದ ಅಧಿಕಾರಿಗಳು ಶ್ರೀಲಂಕಾವನ್ನು ಒತ್ತಾಯಿಸಿದ್ದರಿಂದ ಮೀನುಗಾರರ ಬಿಡುಗಡೆಗೆ ನ್ಯಾಯಾಲಯವು ಆದೇಶಿಸಿದೆ.
ದಕ್ಷಿಣ ನೆರೆಯ ವಿದೇಶಿ ವಿನಿಮಯ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡಲು ಭಾರತವು ಈ ತಿಂಗಳು ಶ್ರೀಲಂಕಾಕ್ಕೆ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿತು. ಈ ತಿಂಗಳ ಆರಂಭದಲ್ಲಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಮತ್ತು ವಿದೇಶಾಂಗ ಸಚಿವ ಜೈಶಂಕರ್ ನಡುವಿನ ಮಾತುಕತೆಯಲ್ಲಿ ಮೀನುಗಾರರ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲಾಗಿತ್ತು.