
ಇಮ್ರಾನ್ ಖಾನ್
ಇಸ್ಲಾಮಾಬಾದ್: ಭಾರತದೊಂದಿಗೆ ಧಾರ್ಮಿಕ ಪ್ರವಾಸೋದ್ಯಮ ಆರಂಭಿಸಬೇಕು ಎಂದು ಪಾಕಿಸ್ತಾನದ ಆಡಳಿತ ಪಕ್ಷದ ಸದಸ್ಯರೊಬ್ಬರು ನೂತನ ಪ್ರಸ್ತಾಪವನ್ನಿಟ್ಟಿದ್ದಾರೆ.
ಭಾರತದ ಜೊತೆ ಧಾರ್ಮಿಕ ಪ್ರವಾಸೋದ್ಯಮವನ್ನು ಆರಂಭಿಸುವ ಕುರಿತು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಆಡಳಿತ ಪಕ್ಷದ ಪ್ರಮುಖ ಹಿಂದೂ ಸಂಸದರೊಬ್ಬರು ಪ್ರಸ್ತಾವ ಸಲ್ಲಿಸಿದ್ದು, ಇದನ್ನು ಪಾಕಿಸ್ತಾನ ವಿದೇಶಾಂಗ ಕಚೇರಿಯೂ ಬೆಂಬಲಿಸಿದೆ ಎಂದು ಹೇಳಲಾಗಿದೆ.
ಪ್ರಸ್ತಾವನೆಯು ಭಾರತ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿರುವುದಾಗಿಯೂ ಹೇಳಲಾಗಿದ್ದು, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಶೇಷ ವಿಮಾನದ ಮೂಲಕ ಪಾಕಿಸ್ತಾನ ಯಾತ್ರಾರ್ಥಿಗಳ ನಿಯೋಗವೊಂದು ಜನವರಿ 29 ರಂದು ಭಾರತಕ್ಕೆ ಹೊರಡಲಿದೆ. ತಾವು ಇದರ ನೇತೃತ್ವ ವಹಿಸುವುದಾಗಿ ಪಾಕಿಸ್ತಾನ ಹಿಂದೂ ಪರಿಷತ್ತಿನ ಮುಖ್ಯಸ್ಥ ಮತ್ತು ರಾಷ್ಟ್ರ ಸಂಸತ್ತಿನ ಸದಸ್ಯ ಡಾ.ರಮೇಶ್ ಕುಮಾರ್ ವಂಕ್ವಾನಿ ಹೇಳಿದ್ದಾರೆ.
ಇದನ್ನೂ ಓದಿ: ಪಾಕ್ ನಲ್ಲಿ ಮಹತ್ವದ ಬೆಳವಣಿಗೆ: ಪಕ್ಷ, ಸೇನೆಯ ಬೆಂಬಲ ಕಳೆದುಕೊಂಡ ಪ್ರಧಾನಿ ಇಮ್ರಾನ್ ಖಾನ್!
ಮೂರು ದಿನಗಳ ಕಾಲ ನಿಯೋಗ ಭಾರತದಲ್ಲೇ ಇರಲಿದ್ದು, ಈ ವೇಳೆ ದೆಹಲಿಯ ನಿಜಾಮುದ್ದೀನ್ ಔಲಿಯಾ ದರ್ಗಾ, ಅಜ್ಮೀರ್‌ನ ಖವಾಜ್ ಘರೀಬ್ ನವಾಜ್ ದರ್ಗಾ ಮತ್ತು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲು ಕಾರ್ಯಕ್ರಮ ಯೋಜಿಸಿದೆ ಎಂದು ರಮೇಶ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಪ್ರಚಾರಕ್ಕಾಗಿ, ಫೆಬ್ರವರಿ 20 ರಂದು ದೆಹಲಿಯಿಂದ ಪೇಶಾವರಕ್ಕೆ ಏರ್ ಇಂಡಿಯಾ ವಿಮಾನವು ಭಾರತೀಯ ಯಾತ್ರಿಕರನ್ನು ಹೊತ್ತು ಖೈಬರ್-ಪಖ್ತುಂಖ್ವಾದ ಕರಾಕ್ ಪ್ರದೇಶದಲ್ಲಿ ಶ್ರೀ ಪರಮ ಹನ್ಸ್ ಜಿ ಮಹಾರಾಜ್, ತೇರಿ ದೇವಸ್ಥಾನದ ಸಮಾಧಿಗೆ ಕರೆತರಲಿದೆ. ಮಾಸಿಕವಾಗಿ ಉಭಯ ದೇಶಗಳ ನಡುವೆ ಸರಣಿ ವಿಮಾನ ಹಾರಾಟ ಆರಂಭಿಸಲಾಗಿದೆ ಎಂದರು. ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಿಂದ ಉಭಯ ದೇಶಗಳ ಜನರನ್ನು ಹತ್ತಿರಕ್ಕೆ ತರಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.