ನಮಗೆ ಅಸಾಧ್ಯವಾದದ್ದನ್ನು ಮಾಡಿದ್ದೀರಿ: 9 ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಿದ್ದಕ್ಕೆ ಮೋದಿಗೆ ಬಾಂಗ್ಲಾ ಪಿಎಂ ಧನ್ಯವಾದ
ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಭಾರತ ಸರ್ಕಾರ 20 ಸಾವಿರ ಭಾರತೀಯರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಪ್ರಾರಂಭಿಸಿತು. ಇದರ ಅಡಿಯಲ್ಲಿ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಭಾರತೀಯರು ಮನೆಗೆ ಮರಳಿದ್ದಾರೆ.
Published: 09th March 2022 03:25 PM | Last Updated: 09th March 2022 03:25 PM | A+A A-

ಶೇಖ್ ಹಸೀನಾ-ಪ್ರಧಾನಿ ಮೋದಿ
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಭಾರತ ಸರ್ಕಾರ 20 ಸಾವಿರ ಭಾರತೀಯರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಪ್ರಾರಂಭಿಸಿತು. ಇದರ ಅಡಿಯಲ್ಲಿ ಇದುವರೆಗೆ 18 ಸಾವಿರಕ್ಕೂ ಹೆಚ್ಚು ಭಾರತೀಯರು ಮನೆಗೆ ಮರಳಿದ್ದಾರೆ. ಉಕ್ರೇನ್ ಗಡಿಯಲ್ಲಿ ಪಾಕಿಸ್ತಾನಿ, ಬಾಂಗ್ಲಾದೇಶಿ ಮತ್ತು ಇತರ ದೇಶಗಳ ವಿದ್ಯಾರ್ಥಿಗಳನ್ನು ಯುದ್ಧಭೂಮಿಯಿಂದ ಆಚೆ ಬರಲು ಭಾರತ ಸಹಾಯ ಮಾಡಿದೆ.
'ಆಪರೇಷನ್ ಗಂಗಾ' ಅಡಿಯಲ್ಲಿ ಉಕ್ರೇನ್ನಿಂದ 9 ಬಾಂಗ್ಲಾದೇಶಿ ನಾಗರಿಕರನ್ನು ರಕ್ಷಿಸಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ಭಾರತೀಯರಲ್ಲದೆ, ನೇಪಾಳ ಮತ್ತು ಟುನೀಶಿಯಾದ ವಿದ್ಯಾರ್ಥಿಗಳನ್ನು ಸಹ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಯುದ್ಧಗ್ರಸ್ತ ಉಕ್ರೇನ್ ನಲ್ಲಿ ನೆರವು: ಭಾರತ ಸರ್ಕಾರ, ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ
ಪಾಕಿಸ್ತಾನ ಮಾತ್ರವಲ್ಲದೆ ಟರ್ಕಿ ಮತ್ತು ಬಾಂಗ್ಲಾದೇಶದ ನಾಗರಿಕರು ಉಕ್ರೇನ್ ತೊರೆಯುವಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು. ಕಳೆದ ವಾರ ಉಕ್ರೇನ್ನಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬರು ಆಪರೇಷನ್ ಗಂಗಾವನ್ನು ಶ್ಲಾಘಿಸಿ, 'ಹಮ್ಸೇ ಬೆಟರ್ ತೋ ಇಂಡಿಯಾ ಹೈ' ಎಂದು ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. 'ಇಲ್ಲಿ ಸಿಲುಕಿರುವ ಭಾರತೀಯರು ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ, ಅವರನ್ನು ಅವರ ದೇಶಕ್ಕೆ ಕರೆದೊಯ್ಯಲಾಗುತ್ತಿದೆ. ನಾವು ಪಾಕಿಸ್ತಾನಿಗಳಾಗಿರುವುದಕ್ಕೆ ಸಂಕಷ್ಟದಲ್ಲಿದ್ದೇವೆ' ಎಂದು ಪಾಕ್ ಪ್ರಜೆ ಹೇಳಿದ್ದರು.
ಉಕ್ರೇನ್ನ ನೆರೆಯ ದೇಶಗಳಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರಿಸಲಾಗಿದೆ. ಈ ಪೈಕಿ ಹಂಗೇರಿ ಮತ್ತು ಪೋಲೆಂಡ್ನಿಂದ ವಿದ್ಯಾರ್ಥಿಗಳನ್ನು ಏರ್ಲಿಫ್ಟ್ ಮಾಡಲಾಗುತ್ತಿದೆ. ಭಾರತೀಯ ವಾಯುಪಡೆ ಕೂಡ ಆಪರೇಷನ್ ಗಂಗಾದಲ್ಲಿ ಭಾಗವಹಿಸಿತ್ತು. ಏರ್ಫೋರ್ಸ್ನ C-17 ಗ್ಲೋಬ್ಮಾಸ್ಟರ್ನ 10 ವಿಮಾನಗಳಿಂದ 2056 ಪ್ರಯಾಣಿಕರನ್ನು ವಾಪಸ್ ಕರೆತರಲಾಗಿದೆ.