ರಷ್ಯಾ-ಉಕ್ರೇನ್ ಯುದ್ಧ; ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ; ವೈಮಾನಿಕ ಮತ್ತು ಕ್ಷಿಪಣಿ ದಾಳಿ ತೀವ್ರ
ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ ಪಡುತ್ತಿದ್ದು, ಶನಿವಾರ ಮುಂಜಾನೆಯಿಂದಲೇ ನಗರದ ಮೇಲೆ ತನ್ನ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ.
Published: 13th March 2022 10:01 AM | Last Updated: 13th March 2022 10:01 AM | A+A A-

ಕೀವ್ ಮೇಲೆ ರಷ್ಯಾ ಸೇನೆ ದಾಳಿ (ಸಂಗ್ರಹ ಚಿತ್ರ)
ಕೀವ್: ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ ಪಡುತ್ತಿದ್ದು, ಶನಿವಾರ ಮುಂಜಾನೆಯಿಂದಲೇ ನಗರದ ಮೇಲೆ ತನ್ನ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ.
ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ಹಿನ್ನಡೆ: 8 ಮೇಜರ್ ಜನರಲ್ ಗಳ ಕಿತ್ತೊಗೆದ ರಷ್ಯಾ ಅಧ್ಯಕ್ಷ ಪುಟಿನ್!!
ಶತಾಯಗತಾಯ ಆದಷ್ಟು ಬೇಗ ಯುದ್ಧ ಸಮಾಪ್ತಿ ಮಾಡಲು ರಷ್ಯಾ ಸೇನೆ ನಿರ್ಧರಿಸಿದಂತ್ತಿದ್ದು, ಉಕ್ರೇನ್ ಅನ್ನು ಸಂಪೂರ್ಣ ವಶಕ್ಕೆ ಪಡೆಯಲು ಪಣತೊಟ್ಟಿರುವ ರಷ್ಯಾ, ಶನಿವಾರ ನಸುಕಿನಿಂದಲೇ ಉಕ್ರೇನ್ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ವೈಮಾನಿಕ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ರಾಜಧಾನಿ ಕೀವ್ ನಗರ ವಶಪಡಿಸಿಕೊಳ್ಳಲು ಮುನ್ನುಗ್ಗುತ್ತಿರುವ ರಷ್ಯಾ ಸೈನಿಕರು, ಕಂಡಕಂಡಲ್ಲಿ ಕ್ಷಿಪಣಿ, ಶೆಲ್ ದಾಳಿ ನಡೆಸಿದ್ದಾರೆ. ಇದರಿಂದ ಬಹುತೇಕ ಎಲ್ಲ ನಗರಗಳಲ್ಲೂ ಯುದ್ಧ ಜ್ವಾಲೆ ಆವರಿಸಿದೆ. ರಷ್ಯಾ ಪಡೆಗಳ ಆರ್ಭಟಕ್ಕೆ ಉಕ್ರೇನ್ ನಗರಗಳ ಜನವಸತಿ ಪ್ರದೇಶಗಳಲ್ಲಿ ಗಗನಚುಂಬಿ ಕಟ್ಟಡಗಳು ಧ್ವಂಸವಾಗುತ್ತಿವೆ.
ಇದನ್ನೂ ಓದಿ: ರಷ್ಯಾದಿಂದ ಮೆಲಿಟೊಪೋಲ್ ಮೇಯರ್ ಅಪಹರಣ: ಉಕ್ರೇನ್ ಆರೋಪ!
ಕೀವ್ ವಶಕ್ಕೆ ಹಾತೊರೆಯುತ್ತಿರುವ ರಷ್ಯಾ ಸೇನೆ ದಾಳಿಯನ್ನು ತೀವ್ರಗೊಳಿಸಿದೆ. ಶನಿವಾರ ರಾಷ್ಟ್ರದ ಹಲವೆಡೆ ವಾಯು ದಾಳಿಯ ಸೈರನ್ ಕೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೀವ್, ಒಡೆಸ್ಸಾ, ಲುವಿವ್, ಹಾರ್ಕಿವ್, ಚೆರ್ಕಾಸಿ, ಸುಮಿ ಮತ್ತಿತರ ನಗರಗಳಲ್ಲಿ ಶನಿವಾರ ನಸುಕಿನಲ್ಲಿ ವಾಯು ದಾಳಿಯ ಸೈರನ್ ಕೇಳಿ ಬಂದಿದೆ.
ಇದನ್ನೂ ಓದಿ: ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಈವರೆಗೆ 1,300 ಉಕ್ರೇನ್ ಸೈನಿಕರ ಬಲಿದಾನ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಉಕ್ರೇನ್ ನ ವಾಸಿಕಿವ್ ಪಟ್ಟಣದ ಸಮೀಪ ಶನಿವಾರ ನಸುಕಿನಲ್ಲಿ ಎಂಟು ಕ್ಷಿಪಣಿಗಳನ್ನು ಹಾರಿಸಿದ ರಷ್ಯಾ, ಉಕ್ರೇನ್ನ ವಾಯುನೆಲೆಯೊಂದನ್ನು ನಾಶಪಡಿಸಿದೆ. ಒಂದು ವಾರದಿಂದ ರಷ್ಯಾ ಸೈನಿಕರು ಮರಿಯುಪೋಲ್ ನಗರಕ್ಕೆ ಮುತ್ತಿಗೆ ಹಾಕಿದ್ದು, ನಿರಂತರ ಬಾಂಬ್ ದಾಳಿ ನಡೆಯುತ್ತಲೇ ಇದೆ. ಶುಕ್ರವಾರ ತಡರಾತ್ರಿ ಮೈಕೊಲೈವ್ ನಗರದ ಕ್ಯಾನ್ಸರ್ ಚಿಕಿತ್ಸೆಯ ಆಸ್ಪತ್ರೆ ಮತ್ತು ನೇತ್ರ ಚಿಕಿತ್ಸಾಲಯದ ಮೇಲೂ ಶೆಲ್ ದಾಳಿ ನಡೆದಿದೆ. ಮೆಲಿಟೊಪೊಲ್ ನಗರದ ಮೇಯರ್ ಇವಾನ್ ಪೆಡೊರೊವ್ ಅವರನ್ನು ರಷ್ಯಾ ಪಡೆಗಳು ಅಪಹರಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದು, ಪೆಡೊರೊವ್ ಸುರಕ್ಷಿತ ಬಿಡುಗಡೆಗಾಗಿ ಜರ್ಮನಿ, ಇಸ್ರೇಲ್ ಮತ್ತು ಫ್ರಾನ್ಸ್ ನೆರವಿಗೆ ಅವರು ಮೊರೆ ಇಟ್ಟಿದ್ದಾರೆ. ಶನಿವಾರದ ದಾಳಿಯಲ್ಲಿ ಎರಡೂ ಕಡೆಯ ಸಾವಿರಾರು ಯೋಧರು ಜತೆಗೆ ನೂರಾರು ನಾಗರಿಕರು ಹತರಾಗಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್- ರಷ್ಯಾ ಯುದ್ಧ: ಕೀವ್ ಬಳಿ ಏರ್ ಫೀಲ್ಡ್ ನಾಶಗೊಳಿಸಿದ ರಷ್ಯಾದ ಕ್ಷಿಪಣಿಗಳು
ಯುದ್ಧ 17ನೇ ದಿನಕ್ಕೆ ಕಾಲಿಟ್ಟಿದ್ದು, ತಂತ್ರ ಬದಲಿಸಿರುವ ರಷ್ಯಾ ಪಡೆಗಳು, ಕೈಗಾರಿಕ ಪ್ರದೇಶಗಳು, ನಾಗರಿಕ ಪ್ರದೇಶಗಳನ್ನೇ ಹೆಚ್ಚು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಕೀವ್, ಹಾರ್ಕಿವ್, ವಾಸಿಕಿವ್, ಮರಿಯುಪೋಲ್, ಮೈಕೊಲೈವ್ ಹಾಗೂ ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾದಿಂದ ಮತ್ತಷ್ಟು ತೀವ್ರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉಕ್ರೇನ್ ಅಧ್ಯಕ್ಷರ ಮುಖ್ಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ: 80 ಮಂದಿಗೆ ಆಶ್ರಯ ನೀಡಿದ್ದ ಮರಿಯುಪೋಲ್ ಮಸೀದಿ ಮೇಲೆ ರಷ್ಯಾ ಶೆಲ್ ದಾಳಿ: ಉಕ್ರೇನ್ ಆರೋಪ
ಉಕ್ರೇನ್ ಯೋಧರೂ ನೆಲದಿಂದ ನಭಕ್ಕೆ ಚಿಮ್ಮುವ ಕ್ಷಿಪಣಿಗಳು, ರಾಕೆಟ್ ಚಾಲಿತ ಗ್ರೆನೇಡ್ಗಳು ಮತ್ತು ಡ್ರೋನ್ಗಳಿಂದ ರಷ್ಯಾ ಪಡೆಗಳಿಗೆ ತೀವ್ರ ಪ್ರತಿರೋಧ ತೋರುತ್ತಿದ್ದಾರೆ.