ಶಾಲೆಯಲ್ಲಿ ಅವಮಾನಿಸಿದ್ದಕ್ಕೆ 30 ವರ್ಷಗಳ ನಂತರ ಶಿಕ್ಷಕಿಯನ್ನೇ ಕೊಂದ ಮಾಜಿ ವಿದ್ಯಾರ್ಥಿ!
ಪ್ರಾಥಮಿಕ ಶಾಲೆಯಲ್ಲಿ ತನ್ನ ಶಿಕ್ಷಕಿಯಿಂದ ಅವಮಾನ ಅನುಭವಿಸಿದೆ ಎಂದು ಹೇಳಿದ 37 ವರ್ಷದ ವ್ಯಕ್ತಿ ಮೂರು ದಶಕಗಳ ನಂತರ ಆಕೆಯನ್ನು ಇರಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬೆಲ್ಜಿಯಂ ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.
Published: 18th March 2022 04:12 PM | Last Updated: 18th March 2022 05:18 PM | A+A A-

ಸಾಂದರ್ಭಿಕ ಚಿತ್ರ
ಬೆಲ್ಜಿಯಂ: ಪ್ರಾಥಮಿಕ ಶಾಲೆಯಲ್ಲಿ ತನ್ನ ಶಿಕ್ಷಕಿಯಿಂದ ಅವಮಾನ ಅನುಭವಿಸಿದೆ ಎಂದು ಹೇಳಿದ 37 ವರ್ಷದ ವ್ಯಕ್ತಿ ಮೂರು ದಶಕಗಳ ನಂತರ ಆಕೆಯನ್ನು ಇರಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬೆಲ್ಜಿಯಂ ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.
1990ರ ದಶಕದ ಆರಂಭದಲ್ಲಿ ಶಿಕ್ಷಕಿ ಮಾರಿಯಾ ವೆರ್ಲಿಂಡೆನ್ ಅವರು ತರಗತಿಯಲ್ಲಿ ಏಳು ವರ್ಷದ ಶಾಲಾ ಬಾಲಕನಿಗೆ ಮಾಡಿದ ಕಾಮೆಂಟ್ಗಳನ್ನು ಆತನು ಎಂದಿಗೂ ಮರೆತಿರಲಿಲ್ಲ ಎಂದು ಗುಂಟರ್ ಉವೆಂಟ್ಸ್ ತನಿಖಾಧಿಕಾರಿಗಳಿಗೆ ತಿಳಿಸಿದರು.
2020ರಲ್ಲಿ ಆಂಟ್ವರ್ಪ್ ಬಳಿಯ ಹೆರೆಂಟಲ್ಸ್ನಲ್ಲಿರುವ ತನ್ನ ಮನೆಯಲ್ಲಿ 59 ವರ್ಷದ ವೆರ್ಲಿಂಡೆನ್ನ ಘೋರ ಹತ್ಯೆ ನಡೆದಿತ್ತು. ಬೆಲ್ಜಿಯಂ ಪೋಲೀಸ್ ತನಿಖೆ ನಡೆಸಿದ್ದು ನೂರಾರು ಡಿಎನ್ಎ ಮಾದರಿಗಳ ಹೊರತಾಗಿಯೂ ಶಿಕ್ಷಕಿಯ ಕೊಲೆಗಾರನನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಆಕೆಯ ಪತಿ ಸಾಕ್ಷಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದರು.
ಮಾಧ್ಯಮ ವರದಿಗಳ ಪ್ರಕಾರ ಆಕೆ 101 ಬಾರಿ ಇರಿಯಲಾಗಿದೆ. ಆಕೆಯ ಶವದ ಪಕ್ಕದಲ್ಲಿದ್ದ ಡೈನಿಂಗ್ ಟೇಬಲ್ ಮೇಲಿದ್ದ ಹಣದ ಪರ್ಸ್ ಅನ್ನು ಮುಟ್ಟದೆ ಇದ್ದದ್ದು ನೋಡಿದರೆ ಇದು ಹಣಕ್ಕಾಗಿ ನಡೆದ ಕೊಲೆ ಅಲ್ಲ ಎಂಬುದು ಪೊಲೀಸರಿಗೆ ತಿಳಿದುಬಂದಿತ್ತು.
2020ರ ನವೆಂಬರ್ 20ರಂದು ಕೊಲೆಯಾಗಿದ್ದು ಹದಿನಾರು ತಿಂಗಳ ನಂತರ, ಉವೆಂಟ್ಸ್ ತನ್ನ ಸ್ನೇಹಿತರ ಬಳಿ ಕೊಲೆ ವಿಚಾರವನ್ನು ಹೇಳಿಕೊಂಡಿದ್ದ. ಈ ವಿಚಾರವನ್ನು ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದರು ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕುರುಹುಗಳೊಂದಿಗೆ ಹೋಲಿಸಲು ಉವೆಂಟ್ಸ್ ಡಿಎನ್ಎ ಮಾದರಿಯನ್ನು ಪಡೆಯಲಾಗಿದೆ.
ಉವೆಂಟ್ಸ್ ನನ್ನು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಕೊಲೆ ಆರೋಪದ ಮೇಲೆ ಕಸ್ಟಡಿಯಲ್ಲಿ ಇರಿಸಲಾಗಿದೆ. ಉವೆಂಟ್ಸ್ ಒಬ್ಬ ಧರ್ಮನಿಷ್ಠ ಕ್ರಿಶ್ಚಿಯನ್ ಎಂದು ಬೆಲ್ಜಿಯಂ ಮಾಧ್ಯಮ ವರದಿ ಮಾಡಿದೆ.