
ಉಕ್ರೇನಿಯನ್ ನಟಿ ಒಕ್ಸಾನಾ ಶ್ವೆಟ್ಸ್
ಕೀವ್: ಉಕ್ರೇನ್ ರಾಜಧಾನಿ ಕೀವ್ ನ ವಸತಿ ಕಟ್ಟಡ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಹತ್ಯೆಗೀಡಾಗಿದ್ದಾರೆ.
ಒಕ್ಸಾನಾ ಅವರ ಹತ್ಯೆಯನ್ನು ದೃಢಪಡಿಸಿರುವ ಅವರ ಯಂಗ್ ಥಿಯೇಟರ್ ತಂಡ ಹೇಳಿಕೆಯನ್ನು ಹೊರಡಿಸಿದ್ದು ಅದರಲ್ಲಿ, ಕೀವ್ ನ ವಸತಿ ಕಟ್ಟಡದ ಮೇಲೆ ನಡೆದ ರಾಕೆಟ್ ಶೆಲ್ಲಿಂಗ್ ನಲ್ಲಿ ಖ್ಯಾತ ಕಲಾವಿದೆ ಒಕ್ಸಾನಾ ಶ್ವೆಟ್ಸ್ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.
ಒಕ್ಸಾನಾ ಅವರಿಗೆ 67 ವರ್ಷವಾಗಿದೆ. ಉಕ್ರೇನ್ ನ ಅತ್ಯುನ್ನತ ಕಲಾವಿದರ ಗೌರವಕ್ಕೆ ಪಾತ್ರರಾಗಿದ್ದ ಒಕ್ಸಾನಾ ದೇಶದ ಅತ್ಯುನ್ನತ ಕಲಾವಿದರಲ್ಲಿ ಒಬ್ಬರಾಗಿದ್ದರು ಎಂದು ಹಾಲಿವುಡ್ ನ ವರದಿಗಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನಿಯನ್ನರಿಗೆ ಆಶ್ರಯ ನೀಡಿದ್ದ ಥಿಯೇಟರ್ ಮೇಲೆ ರಷ್ಯಾ ವೈಮಾನಿಕ ದಾಳಿ: ಹಲವರಿಗೆ ಗಾಯ
ಉಕ್ರೇನ್ ವಿರುದ್ಧ ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ್ದು ಈಗಲೂ ದಾಳಿಯನ್ನು ಮುಂದುವರಿಸಿದೆ. ವಿಶೇಷ ಕಾರ್ಯಾಚರಣೆಯು ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಪ್ರಕಾರ, ಸಂಘರ್ಷದ ಆರಂಭದಿಂದಲೂ ಉಕ್ರೇನ್‌ನಲ್ಲಿ ಸುಮಾರು 600 ನಾಗರಿಕರು ಮೃತಪಟ್ಟಿದ್ದು, 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.