ಉಕ್ರೇನ್-ರಷ್ಯಾ ಯುದ್ಧ: ಶರಣಾಗತಿ ಗಡುವು ತಿರಸ್ಕರಿಸಿದ ಉಕ್ರೇನ್
ಉಕ್ರೇನ್ ಮೇಲಿನ ರಷ್ಯಾ ದಾಳಿ 26ನೇ ದಿನಕ್ಕೆ ಕಾಲಿಟ್ಟಿದೆ. ಈ ಭೀಕರ ಯುದ್ಧದಲ್ಲಿ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ. ಅಲ್ಲದೆ, ಮಾರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವ ಸಂಬಂಧ ರಷ್ಯಾ ನೀಡಿದ್ದ ಶರಣಾಗತಿ ಗಡುವು ಮುಗಿದಿದೆ.
Published: 21st March 2022 10:41 AM | Last Updated: 21st March 2022 01:49 PM | A+A A-

ಸಂಗ್ರಹ ಚಿತ್ರ
ಮಾಸ್ಕೋ/ಕೈವ್: ಉಕ್ರೇನ್ ಮೇಲಿನ ರಷ್ಯಾ ದಾಳಿ 26ನೇ ದಿನಕ್ಕೆ ಕಾಲಿಟ್ಟಿದೆ. ಈ ಭೀಕರ ಯುದ್ಧದಲ್ಲಿ ಶರಣಾಗುವುದಿಲ್ಲ ಎಂದು ಸ್ಪಷ್ಟ ಸಂಕೇತವನ್ನು ಉಕ್ರೇನ್ ಸೇನೆ ನೀಡಿದೆ. ಅಲ್ಲದೆ, ಮಾರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವ ಸಂಬಂಧ ರಷ್ಯಾ ನೀಡಿದ್ದ ಶರಣಾಗತಿ ಗಡುವು ಮುಗಿದಿದೆ.
ರಷ್ಯಾ ಭಾನುವಾರ ರಾತ್ರಿ ಮಾರಿಯುಪೋಲ್‌ನಲ್ಲಿನ ಆಡಳಿತ ವರ್ಗಕ್ಕೆ ಶರಣಾಗುವಂತೆ ಸೂಚಿಸಿತ್ತು. ಮಾಸ್ಕೋ ಸಮಯ 5 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ) ಗಡುವು ನೀಡಿತ್ತು. ಆದರೆ, ಈ ಶರಣಾಗತಿಯ ಪ್ರಸ್ತಾಪವನ್ನು ಉಕ್ರೇನ್ ಸರಕಾರ ಈಗಾಗಲೇ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಮಾರಿಯುಪೋಲ್ ನಲ್ಲಿ ರಷ್ಯಾ ಬಾಂಬ್ ದಾಳಿ ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಮಾತುಕತೆ ವಿಫಲವಾದರೆ ಮೂರನೇ ಮಹಾಯುದ್ಧ ಎಂದರ್ಥ’: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಮತ್ತೊಂದೆಡೆ ರಷ್ಯಾದ ಸೈನ್ಯವು ಭಾನುವಾರ ರಾತ್ರಿ ರಾಜಧಾನಿ ಕೈವ್‌ನ ವಸತಿ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ವೈಮಾನಿಕ ದಾಳಿಯಲ್ಲಿ ಅನೇಕರು ಸಾವಿಗೀಡಾಗಿದ್ದು, ಹಲವಾರು ಮನೆಗಳು ಮತ್ತು ಶಾಪಿಂಗ್ ಮಾಲ್ ಧ್ವಂಸಗೊಂಡಿವೆ.
ಶರಣಾಗತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಉಕ್ರೇನ್
ರಷ್ಯಾಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್‌ನ ಉಪ ಪ್ರಧಾನಿ ಐರಿನಾ ವೆರೆಶ್‌ಚುಕ್ ಹೇಳಿದ್ದಾರೆ. ಯಾವುದೇ ರೀತಿಯಲ್ಲಿ ಶರಣಾಗತಿ ಅಥವಾ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತಹ ಮಾತುಕತೆಗಳು ರಷ್ಯಾದ ಜೊತೆ ನಡೆಯಲು ಸಾಧ್ಯವಿಲ್ಲ.
ಈ ಬಗ್ಗೆ ನಾವು ಈಗಾಗಲೇ ರಷ್ಯಾಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಪುಟಿನ್ ಗೆ ಬರೆದಿರುವ 8 ಪುಟಗಳ ಪತ್ರದಲ್ಲಿ ಸಮಯ ವ್ಯರ್ಥ ಮಾಡುವ ಬದಲು ರಷ್ಯಾ ಮಾನವೀಯ ಕಾರಿಡಾರ್ ತೆರೆಯಬೇಕು ಎಂದು ಐರಿನಾ ವೆರೆಶ್ ಚುಕ್ ತಿಳಿಸಿದ್ದಾರೆ.
ಮಾರಿಯುಪೋಲ್‌ನಿಂದ ಮಾನವೀಯ ಕಾರಿಡಾರ್ ತೆರೆಯಲು ರಷ್ಯಾ ನಿರ್ಧಾರ
ಉಕ್ರೇನ್‌ನ ಮರಿಯುಪೋಲ್‌ನಲ್ಲಿರುವ ಮಾನವೀಯ ಕಾರಿಡಾರ್ ಅನ್ನು ಸೋಮವಾರ (ಸ್ಥಳೀಯ ಕಾಲಮಾನ) ಬೆಳಗ್ಗೆ 10 ಗಂಟೆಗೆ ತೆರೆಯಲಾಗುವುದು ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಮಿಖಾಯಿಲ್ ಮಿಜಿಂಟ್ಸೆವ್ ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ: ಮತ್ತೊಂದೆಡೆ ನ್ಯಾಟೋ ವಿಮಾನ ಪತನ; 4 ಅಮೆರಿಕಾ ಯೋಧರ ದುರ್ಮರಣ, ನಾರ್ವೆ ಪ್ರಧಾನಿ ಹೇಳಿದ್ದೇನು?
ಆರು ದೇಶಗಳ 184 ವಿದೇಶಿಯರು ಸೇರಿದಂತೆ 130,000 ನಾಗರಿಕರನ್ನು ಪ್ರಸ್ತುತ ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ಮಾನವ ಜೀವಗಳನ್ನು ಉಳಿಸಲು ಮತ್ತು ಮಾರಿಯುಪೋಲ್‌ನ ಮೂಲಸೌಕರ್ಯವನ್ನು ಸಂರಕ್ಷಿಸಲು… ರಷ್ಯಾವು ಉಕ್ರೇನಿಯನ್ ಕಡೆಯೊಂದಿಗೆ ಒಪ್ಪಂದದ ಮೇಲೆ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮಾರಿಯುಪೋಲ್ನಿಂದ ಮಾನವೀಯ ಕಾರಿಡಾರ್ ಅನ್ನು ಮಾರ್ಚ್ 21 ರಂದು ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಸಮಯ) ತೆರೆಯುತ್ತದೆ” ಎಂದು ಮಿಜಿಂಟ್ಸೆವ್ ಭಾನುವಾರ ಹೇಳಿದರು.
ರಷ್ಯಾ ಮತ್ತು ಡೊನೆಟ್ಸ್ಕ್ ಪಡೆಗಳು ಯಾವುದೇ ಶೆಲ್ ದಾಳಿಯನ್ನು ಮಾಡುವುದಿಲ್ಲ. ಬೆಳಗ್ಗೆ 9:30 ರಿಂದ (ಸ್ಥಳೀಯ ಸಮಯ) ಈ ಒಪ್ಪಂದದ ಅನುಸರಣೆಯನ್ನು ಖಾತರಿಪಡಿಸುತ್ತದೆ ಎಂದು ಅವರು ತಿಳಿಸಿದರು.
ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ (ಸ್ಥಳೀಯ ಸಮಯ) ಉದ್ದೇಶಿತ ಕ್ರಮಗಳಿಗೆ ಕೈವ್‌ನ ಪ್ರತಿಕ್ರಿಯೆಗಾಗಿ ರಷ್ಯಾ ಕಾಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.