ಜೈಲಿನಲ್ಲೇ ಗೆಳತಿ ಸ್ಟೆಲ್ಲಾರನ್ನು ವಿವಾಹವಾದ ವಿಕಿಲೀಕ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ!
ಖ್ಯಾತ ಗುಪ್ತಚರ ಸುದ್ದಿ ಸಂಸ್ಥೆ ವಿಕಿಲೀಕ್ಸ್ ನ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ತಾವು ಬಂಧಿಯಾಗಿರುವ ಬ್ರಿಟಿಷ್ ಜೈಲಿನಲ್ಲೇ (Julian Assange) ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ (Stella Moris)ರನ್ನು ವಿವಾಹವಾಗಿದ್ದಾರೆ.
Published: 24th March 2022 12:02 PM | Last Updated: 24th March 2022 01:35 PM | A+A A-

ಜೂಲಿಯನ್ ಅಸ್ಸಾಂಜೆ ಪತ್ನಿ ಸ್ಟೆಲ್ಲಾ
ಲಂಡನ್: ಖ್ಯಾತ ಗುಪ್ತಚರ ಸುದ್ದಿ ಸಂಸ್ಥೆ ವಿಕಿಲೀಕ್ಸ್ ನ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ತಾವು ಬಂಧಿಯಾಗಿರುವ ಬ್ರಿಟಿಷ್ ಜೈಲಿನಲ್ಲೇ (Julian Assange) ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ (Stella Moris)ರನ್ನು ವಿವಾಹವಾಗಿದ್ದಾರೆ.
ಲಂಡನ್ ಪೊಲೀಸರ ಭದ್ರತೆಯಲ್ಲಿ ಬೆಲ್ಮಾರ್ಶ್ ಸೆರೆಮನೆ ಹಾಲ್ನಲ್ಲಿ ಅಸ್ಸಾಂಜೆ ಮತ್ತು ಸ್ಟೆಲ್ಲಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಬುಧವಾರ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ವಿವಾಹದ ಸಂದರ್ಭದಲ್ಲಿ ಇಬ್ಬರು ಸಾಕ್ಷಿಗಳು, ಜೈಲು ಅಧಿಕಾರಿಗಳು ಸೇರಿದಂತೆ 8 ಜನ ಹಾಜರಿದ್ದರು ಎಂದು ಹೇಳಲಾಗಿದೆ.
ಮದುವೆಯ ಬಳಿಕ ಜೈಲಿನಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ಟೆಲ್ಲಾ, ‘ನನಗೆ ಸಂತೋಷದ ಜೊತೆಗೆ ದುಃಖವೂ ಆಗುತ್ತಿದೆ. ಈ ಸಮಯದಲ್ಲಿ ಅಸ್ಸಾಂಜೆ ಹೊರಗಡೆ ಇರಬೇಕಿತ್ತು. ಅವರಿಗಾಗಿ ನಾನು ಕಾಯುತ್ತೇನೆ ಎಂದು ಹೇಳಿದ್ದಾರೆ.
2015ರಿಂದ ಅಸ್ಸಾಂಜೆ ಮತ್ತು ಸ್ಟೆಲ್ಲಾ ಸಹ ಜೀವನ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. 2019ರಿಂದ ಅವರು ಲಂಡನ್ ಜೈಲಿನಲ್ಲಿ ಇದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಸ್ಟೆಲ್ಲಾ ವಿಕಿಲೀಕ್ಸ್ ಕಂಪನಿಯ ಲೀಗಲ್ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ವಿವಿಧ ದೇಶಗಳಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಮತ್ತು ರಹಸ್ಯ ಮಿಲಿಟರಿ ದಾಖಲೆಗಳ ಸೋರಿಕೆಯ ಆರೋಪದಡಿಯಲ್ಲಿ ಅಸ್ಸಾಂಜೆ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ. ಅಮೆರಿಕ ಇವರ ಮೇಲೆ 18 ಪ್ರಕರಣಗಳನ್ನು ದಾಖಲಿಸಿದ್ದು ವಿಚಾರಣೆಗಾಗಿ ತಮಗೆ ಹಸ್ತಾಂತರಿಸಬೇಕು ಎಂದು ಬ್ರಿಟನ್ ಮೇಲೆ ಒತ್ತಡ ಹೇರುತ್ತಾ ಬಂದಿದೆ.