17 ಸಾವಿರ ಸೈನಿಕರು, 123 ಯುದ್ಧ ವಿಮಾನ, 127 ಚಾಪರ್... ಉಕ್ರೇನ್ ಮೇಲೆ ಯುದ್ಧ ಸಾರಿ ರಷ್ಯಾ ಕಳೆದುಕೊಂಡಿದ್ದಿಷ್ಟು ನೋಡಿ!
ಪುಟ್ಟರಾಷ್ಟ್ರ, ಅಣ್ವಸ್ತ್ರ ರಹಿತ ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿ ಕೆಲವೇ ದಿನಗಳಲ್ಲಿ ಜಯಭೇರಿ ಭಾರಿಸಬಹುದು ಎಂದು ಎಂದೆಣಿಸಿದ್ದ ರಷ್ಯಾ ಸೇನೆ ಯೋಜನೆ ಉಲ್ಟಾ ಹೊಡೆದಿದ್ದು, ಯುದ್ಧದಿಂದಾಗಿ ರಷ್ಯಾ ಸೇನೆ ಸಾಕಷ್ಟು ಪ್ರಮಾಣದ ಸೇನಾ ಆಸ್ತಿಯನ್ನು ಕಳೆದುಕೊಂಡಿದೆ.
Published: 28th March 2022 05:00 PM | Last Updated: 28th March 2022 05:53 PM | A+A A-

ಸಂಗ್ರಹ ಚಿತ್ರ
ಕೀವ್: ಪುಟ್ಟರಾಷ್ಟ್ರ, ಅಣ್ವಸ್ತ್ರ ರಹಿತ ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿ ಕೆಲವೇ ದಿನಗಳಲ್ಲಿ ಜಯಭೇರಿ ಭಾರಿಸಬಹುದು ಎಂದು ಎಂದೆಣಿಸಿದ್ದ ರಷ್ಯಾ ಸೇನೆ ಯೋಜನೆ ಉಲ್ಟಾ ಹೊಡೆದಿದ್ದು, ಯುದ್ಧದಿಂದಾಗಿ ರಷ್ಯಾ ಸೇನೆ ಸಾಕಷ್ಟು ಪ್ರಮಾಣದ ಸೇನಾ ಆಸ್ತಿಯನ್ನು ಕಳೆದುಕೊಂಡಿದೆ.
ಹೌದು.. ಉಕ್ರೇನ್ ಮೇಲಿನ ರಷ್ಯಾ ಯುದ್ಧ ಸರಿಸುಮಾರು 2ನೇ ತಿಂಗಳಿಗೆ ಕಾಲಿಟ್ಟಿದ್ದು, ಈ ಯುದ್ಧದಲ್ಲಿ ರಷ್ಯಾ ಕಳೆದುಕೊಂಡ ಸೇನಾ ಆಸ್ತಿಗಳ ಕುರಿತು ಉಕ್ರೇನ್ ಸೇನೆ ಮಾಹಿತಿ ನೀಡಿದೆ. ಉಕ್ರೇನ್‌ನ ಸಶಸ್ತ್ರ ಪಡೆಗಳ ಪ್ರಕಾರ ಮಾರ್ಚ್ 28 ರ ಹೊತ್ತಿಗೆ ರಷ್ಯಾದ ಯುದ್ಧ ನಷ್ಟಗಳ ಸೂಚಕ ಅಂದಾಜಿನ ಪ್ರಕಾರ, 17 ಸಾವಿರ ಸೈನಿಕರು, 123 ಯುದ್ಧ ವಿಮಾನ, 127 ಚಾಪರ್ ಗಳು, 586 ಯುದ್ಧ ಟ್ಯಾಂಕರ್ ಗಳು, 302 ಆರ್ಟಿಲರಿ ವಾಹನಗಳು, 1694 ಸೇನಾ ಸಿಬ್ಬಂದಿ ವಾಹಕಗಳು, 4 ಮೊಬೈಲ್ ಕ್ಷಿಪಣಿ ಉಡಾವಣಾ ವಾಹಕಗಳು, 95 ಎಂಎಲ್ಆರ್ಎಸ್, 7 ಬೋಟ್ ಗಳು, 1150 ವಾಹನಗಳು, 73 ಇಂಧನ ವಾಹನಗಳು, 66 ಡ್ರೋನ್ ಗಳು, 54 ಆ್ಯಂಟಿ ಏರ್ ಕ್ರಾಫ್ಟ್ ವಾರ್ ಫೇರ್ ಗಳು, 21 ವಿಶೇಷ ಸೇನಾವಾಹನಗಳು ನಾಶವಾಗಿವೆ ಎಂದು ಹೇಳಿದೆ.
ಅಲ್ಲದೆ ಪೂರೈಕೆ ಸಮಸ್ಯೆಗಳು ಮತ್ತು ಉಕ್ರೇನಿಯನ್ ಹೋರಾಟಗಾರರ ಆಕ್ರಮಣಕಾರಿ ಪ್ರತಿರೋಧದ ನಡುವೆ ಕಳೆದ 24 ಗಂಟೆಗಳಲ್ಲಿ ರಷ್ಯಾದ ಪಡೆಗಳು ಯಾವುದೇ ಮಹತ್ವದ ಪ್ರಗತಿಯನ್ನು ಸಾಧಿಸಿಲ್ಲ ಎಂದು ಬ್ರಿಟನ್ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ನೈತಿಕತೆ, ಯೋಜನೆಯ ಕೊರತೆ ಮತ್ತು ಆವೇಗದ ಕೊರತೆಯು ರಷ್ಯಾದ ಪಡೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಕೀರ್ಣಗೊಳಿಸಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತನ್ನ ಇತ್ತೀಚಿನ ಗುಪ್ತಚರ ಮಾಹಿತಿಯಲ್ಲಿ ತಿಳಿಸಿದೆ.
ಅಂತೆಯೇ ಕಪ್ಪು ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಅಜೋವ್ ಸಮುದ್ರದಲ್ಲಿರುವ ಬಂದರನ್ನು ವಶಪಡಿಸಿಕೊಳ್ಳಲು ರಷ್ಯಾದ ಪಡೆಗಳು ಪ್ರಯತ್ನಿಸುತ್ತಿರುವುದರಿಂದ ಮಾರಿಯುಪೋಲ್ ಸುತ್ತಲೂ ಭಾರೀ ಹೋರಾಟ ಮುಂದುವರಿದಿದೆ. ಕಡಲ ವ್ಯಾಪಾರವನ್ನು ಕಡಿತಗೊಳಿಸಿದೆ.