ಪ್ರಧಾನಿ ಮೋದಿ ಯುರೋಪ್ ಭೇಟಿ: ಜಿ7 ಶೃಂಗಸಭೆಗೆ ಜರ್ಮನಿ ಚಾನ್ಸೆಲರ್ ಆಹ್ವಾನ!
ಮೂರು ದಿನಗಳ ಯುರೋಪ್ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ರಾಜಧಾನಿ ಬರ್ಲಿನ್ ತಲುಪಿದ್ದಾರೆ. ಇಲ್ಲಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾದರು.
Published: 02nd May 2022 08:46 PM | Last Updated: 03rd May 2022 01:04 PM | A+A A-

ಮೋದಿ-ಓಲಾಫ್
ಬರ್ಲಿನ್: ಮೂರು ದಿನಗಳ ಯುರೋಪ್ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ರಾಜಧಾನಿ ಬರ್ಲಿನ್ ತಲುಪಿದ್ದಾರೆ. ಇಲ್ಲಿ ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾದರು. ನಂತರ ಇಬ್ಬರೂ ನಾಯಕರು ಬರ್ಲಿನ್‌ನಲ್ಲಿ ನಡೆದ ಭಾರತ-ಜರ್ಮನಿ ಐಜಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಭಾರತೀಯ ಸಮುದಾಯ ಅವರಿಗೆ ಆತ್ಮೀಯ ಸ್ವಾಗತ ನೀಡಿತು. ಫೆಡರಲ್ ಚಾನ್ಸೆಲರಿ ಮುಂಭಾಗದಲ್ಲಿ ಜನರು ಬೆಳಿಗ್ಗೆಯಿಂದಲೇ ನೂಕುನುಗ್ಗಲು ಪ್ರಾರಂಭಿಸಿದರು. ಬರ್ಲಿನ್‌ನಿಂದ ಪ್ರಧಾನಿ ಮೋದಿ ಮೇ 3 ರಂದು ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್ ತೆರಳಲಿದ್ದಾರೆ.
ಐಜಿಸಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2019ರಲ್ಲಿ ನಮ್ಮ ಕೊನೆಯ ಐಜಿಸಿ ಬಳಿಕ ಜಗತ್ತು ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಕೋವಿಡ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಇತ್ತೀಚಿನ ಭೌಗೋಳಿಕ ರಾಜಕೀಯ ಘಟನೆಗಳು ವಿಶ್ವ ಶಾಂತಿ ಮತ್ತು ಸ್ಥಿರತೆ ಎಷ್ಟು ದುರ್ಬಲವಾಗಿದೆ ಮತ್ತು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ತೋರಿಸಿದೆ. “ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ ಮತ್ತು ಜರ್ಮನಿ ಹಲವು ಸಾಮಾನ್ಯ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಈ ಹಂಚಿಕೆಯ ಮೌಲ್ಯಗಳು ಮತ್ತು ಸಾಮಾನ್ಯ ಆಸಕ್ತಿಗಳ ಆಧಾರದ ಮೇಲೆ ನಡೆಯುತ್ತಿದೆ, ನಮ್ಮ ದ್ವಿಪಕ್ಷೀಯ ಸಂಬಂಧಗಳು ವರ್ಷಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ” ಎಂದು ಮೋದಿ ಹೇಳಿದರು.
ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. 2022ರಲ್ಲಿ ಇದು ನನ್ನ ಮೊದಲ ವಿದೇಶಿ ಪ್ರವಾಸ ಎಂದ ಪ್ರಧಾನಿ ಮೋದಿ, ಭಾರತ ಯುರೋಪ್ ಗೆ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದನ್ನು ಇದರಿಂದ ತಿಳಿಯಬಹುದು. ರುಸ್ಸೋ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಅವರು, “ಉಕ್ರೇನಿಯನ್ ಬಿಕ್ಕಟ್ಟಿನ ಆರಂಭದಿಂದಲೂ ಭಾರತ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದೆ.
ವಿವಾದವನ್ನು ಪರಿಹರಿಸಲು ಮಾತುಕತೆಯೇ ಏಕೈಕ ಮಾರ್ಗವಾಗಿದೆ ಎಂದು ಒತ್ತಿಹೇಳಿದ್ದೇವೆ. ಈ ಯುದ್ಧದಲ್ಲಿ ಗೆಲ್ಲುವ ಪಕ್ಷವಿಲ್ಲ. ಎಲ್ಲರೂ ತೊಂದರೆ ಅನುಭವಿಸುತ್ತಾರೆ. ಅದಕ್ಕಾಗಿಯೇ ನಾವು ಶಾಂತಿಯ ಪರವಾಗಿದ್ದೇವೆ. ಉಕ್ರೇನ್ ಬಿಕ್ಕಟ್ಟಿನ ಪ್ರಕ್ಷುಬ್ಧತೆ ತೈಲ ಬೆಲೆ ಗಗನಕ್ಕೇರುತ್ತಿದೆ. ವಿಶ್ವದಲ್ಲಿ ರಸಗೊಬ್ಬರದ ಕೊರತೆಯಿದೆ. ಇದು ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಯುದ್ಧದ ಮಧ್ಯೆ ಭಾರತದ ಕಡೆಯಿಂದ ಉಕ್ರೇನ್‌ಗೆ ಮಾನವೀಯ ಸಹಾಯವನ್ನು ಕಳುಹಿಸಿದ್ದೇವೆ” ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ: 3 ದೇಶಗಳ ಯುರೋಪ್ ಪ್ರವಾಸ: ಬರ್ಲಿನ್ ಗೆ ಪ್ರಧಾನಿ ಮೋದಿ ಆಗಮನ; ಅದ್ಧೂರಿ ಸ್ವಾಗತ; ದೇಶಭಕ್ತಿಗೀತೆ ಹಾಡಿ ರಂಜಿಸಿದ ಬಾಲಕ!
ಉಭಯ ನಾಯಕರು ವ್ಯಾಪಾರ, ಸಾಂಸ್ಕೃತಿಕ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಪರಿಶೀಲಿಸಿದರು. ಭಾರತದ ಪಿಎಂಒ ಕಚೇರಿಯು ಈ ಬಗ್ಗೆ ಟ್ವೀಟ್ ಮಾಡಿದ್ದು, “ಭಾರತ-ಜರ್ಮನಿ ಸಹಕಾರವನ್ನು ವಿಸ್ತರಿಸುವುದು. ಪ್ರಧಾನಿ ನರೇಂದ್ರ ಮೋದಿ ಮತ್ತು ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಬರ್ಲಿನ್‌ನಲ್ಲಿ ಭೇಟಿಯಾದರು. ಡಿಸೆಂಬರ್ 2021 ರಲ್ಲಿ ಅಧಿಕಾರ ವಹಿಸಿಕೊಂಡ ಜರ್ಮನಿಯ ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ಇದು ಪ್ರಧಾನಿ ಮೋದಿಯವರ ಮೊದಲ ಭೇಟಿಯಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ, ಪಿಎಂಒ, ಪ್ರಧಾನಿ ಮೋದಿ ಮತ್ತು ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ನಡುವಿನ ಮಾತುಕತೆ ಬರ್ಲಿನ್‌ನಲ್ಲಿ ಮುಂದುವರಿಯುತ್ತದೆ. ಉಭಯ ನಾಯಕರು ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳು ಇತ್ಯಾದಿಗಳನ್ನು ಉತ್ತೇಜಿಸುವುದು ಸೇರಿದಂತೆ ಭಾರತ ಮತ್ತು ಜರ್ಮನಿ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಪರಿಶೀಲಿಸಿದರು ಎಂದು ಟ್ವೀಟ್ ಮಾಡಿದೆ.
ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ತಮ್ಮ ಜರ್ಮನಿಯ ಅನ್ನಾಲಿನಾ ಬೇಯರ್‌ಬಾಕ್ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು. ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು. ಜೈಶಂಕರ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಿಯೋಗದ ಭಾಗವಾಗಿದ್ದಾರೆ. ಜೈಶಂಕರ್ ಅವರು ಜರ್ಮನಿಯ ವಿದೇಶಾಂಗ ಸಚಿವ ಬೇಯರ್‌ಬಾಕ್ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು. ಜೈಶಂಕರ್ ಟ್ವೀಟ್ ಮಾಡಿ, “ವಿದೇಶಾಂಗ ಸಚಿವ ಬೇರ್‌ಬಾಕ್ ಅವರೊಂದಿಗೆ ಉತ್ತಮ ಸಂಭಾಷಣೆ. ನಾವು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದ್ದೇವೆ. ಉಕ್ರೇನ್ ಸಂಘರ್ಷ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ವಿಷಯದ ಕುರಿತು ಚರ್ಚಿಸಲಾಗಿದೆ. ಎರಡು ವಿದೇಶಿ ಕಚೇರಿಗಳ ನಡುವಿನ ನೇರ ವಿಶೇಷ ಸಂಪರ್ಕದ ಒಪ್ಪಂದಕ್ಕೆ ಸಹಿ ಹಾಕಿದರು. ಅಂತಾರಾಷ್ಟ್ರೀಯ ಸಮಾಲೋಚನೆಗಳ (ಐಜಿಸಿ) ಸಮಗ್ರ ಅಧಿವೇಶನದಲ್ಲಿ ಭಾಗವಹಿಸುವುದಾಗಿ ವಿದೇಶಾಂಗ ಸಚಿವರು ಹೇಳಿದರು.