ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ: ನಾರ್ಡಿಕ್ ದೇಶಗಳಿಂದ ಭಾರತಕ್ಕೆ ಬೆಂಬಲ
ಸುಧಾರಿತ ಮತ್ತು ವಿಸ್ತರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ತಮ್ಮ ಬೆಂಬಲವನ್ನು ನಾರ್ಡಿಕ್ ದೇಶಗಳು ಪುನರುಚ್ಚರಿಸಿವೆ.
Published: 05th May 2022 10:26 AM | Last Updated: 05th May 2022 01:01 PM | A+A A-

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಐದು ದೇಶಗಳ ಪ್ರಧಾನ ಮಂತ್ರಿಗಳು
ನವದೆಹಲಿ: ಸುಧಾರಿತ ಮತ್ತು ವಿಸ್ತರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ತಮ್ಮ ಬೆಂಬಲವನ್ನು ನಾರ್ಡಿಕ್ ದೇಶಗಳು ಪುನರುಚ್ಚರಿಸಿವೆ.
ನಾರ್ವೆ ಮತ್ತು ಫಿನ್ಲ್ಯಾಂಡ್ ಯುಎನ್ಎಸ್ಸಿಯಲ್ಲಿ (UNSC) ಭಾರತದ ಬೇಡಿಕೆಯನ್ನು ಬೆಂಬಲಿಸುತ್ತಿದ್ದರೆ, ಇತರ ನಾರ್ಡಿಕ್ ದೇಶಗಳಾದ ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ಗಳು, ನಿಯಮಾಧಾರಿತ ಅಂತರರಾಷ್ಟ್ರೀಯ ಆದೇಶಕ್ಕೆ ತಮ್ಮ ಬೆಂಬಲವನ್ನು ನೀಡಿವೆ. ಜಾಗತಿಕ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸುವ ಉದ್ದೇಶದಿಂದ ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.
ಇದು ಭದ್ರತಾ ಮಂಡಳಿಯನ್ನು ಒಳಗೊಂಡಂತೆ ವಿಶ್ವಸಂಸ್ಥೆಯ ಸುಧಾರಣೆಗೆ ದೇಶಗಳು ಕೈಜೋಡಿಸಿ ಕೆಲಸ ಮಾಡುವುದಾಗಿದ್ದು, ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡುವುದಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಯ ಸುಧಾರಣೆಯ ಬಗ್ಗೆ ಮಾತುಕತೆಗಳು ನಡೆದಿವೆ, ಸಾಂಕ್ರಾಮಿಕ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಸೇರಿದಂತೆ ಜಾಗತಿಕ ಆರೋಗ್ಯ ಸಮಸ್ಯೆಗಳ ಕುರಿತು ಸಹಯೋಗವನ್ನು ಬಲಪಡಿಸುವ ಕುರಿತು ಮಾತುಕತೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಹೇಳಿಕೆ ತಿಳಿಸಿದೆ.
ಕಳೆದೊಂದು ದಶಕದಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತವು ಬೇಡಿಕೆಯೊಡ್ಡುತ್ತಲೇ ಬಂದಿದೆ, ಆದರೆ ಚೀನಾ ಇದಕ್ಕೆ ಅಡ್ಡಗಾಲಾಗಿದೆ. ಆದಾಗ್ಯೂ, ನಾರ್ಡಿಕ್ ದೇಶಗಳಿಂದ ಬೆಂಬಲ ಬರುತ್ತಿರುವುದರಿಂದ, ಭಾರತದ ಭರವಸೆ ಹೆಚ್ಚಾಗಿದೆ. ಕಳೆದ ತಿಂಗಳು ರೈಸಿನಾ ಸಂವಾದಕ್ಕಾಗಿ ದೆಹಲಿಗೆ ಭೇಟಿ ನೀಡಿದಾಗ ನಾರ್ವೆಯ ವಿದೇಶಾಂಗ ಸಚಿವ ಅನ್ನಿಕೆನ್ ಹ್ಯೂಟ್ಫೆಲ್ಡ್ಟ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವಿನ ಚರ್ಚೆಯಲ್ಲಿ ಯುಎನ್ಎಸ್ಸಿ ವಿಷಯವೂ ಬಂದಿತ್ತು.
ಇದನ್ನೂ ಓದಿ: ಫ್ರ್ಯಾನ್ಸ್ ನಲ್ಲಿ ಪ್ರಧಾನಿ: ಅಧ್ಯಕ್ಷ ಮ್ಯಾಕ್ರಾನ್-ಮೋದಿ ಭೇಟಿ
ಇದಲ್ಲದೆ, ನಾರ್ಡಿಕ್ ದೇಶಗಳೊಂದಿಗೆ ಸಹಿ ಮಾಡಿದ ದ್ವಿಪಕ್ಷೀಯ ಒಪ್ಪಂದಗಳು, ಯುಎನ್ಎಸ್ಸಿಯ ಭಾರತದ ಶಾಶ್ವತ ಸದಸ್ಯತ್ವಕ್ಕೆ ಅವರ ಬೆಂಬಲವು ಪಿಎಂ ಮೋದಿ ಅವರ ಡೆನ್ಮಾರ್ಕ್ ಭೇಟಿಯ ಉದ್ದೇಶಗಳಲ್ಲಿ ಒಂದಾಗಿದೆ.
ಭಾರತ-ನಾರ್ಡಿಕ್ ಶೃಂಗಸಭೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಾರ್ವೆ, ಫಿನ್ಲ್ಯಾಂಡ್, ಸ್ವೀಡನ್, ಡೆನ್ಮಾರ್ಕ್ ಮತ್ತು ಐಸ್ಲ್ಯಾಂಡ್ನ ಪ್ರಧಾನ ಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿಯಾದರು, ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದರೊಂದಿಗೆ, ಭಾರತದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಬೆಂಬಲವನ್ನು ಪಡೆಯುವುದು ಉದ್ದೇಶವಾಗಿತ್ತು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯರಾಗಿ, ಭಾರತ ಮತ್ತು ನಾರ್ವೆ ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಪರಸ್ಪರ ಮಾತುಕತೆಯಲ್ಲಿ ತೊಡಗಿಸಿಕೊಂಡಿವೆ ಎಂದು ನಾರ್ವೆಯ ಪಿಎಂ ಜೋನಾ ಗಹರ್ ಸ್ಟೋರ್ ಅವರನ್ನು ಪ್ರಧಾನಿ ಮೋದಿಯವರು ಭೇಟಿಯಾದ ನಂತರ ವಿದೇಶಾಂಗ ಇಲಾಖೆ ಹೇಳಿದೆ.
ನಾರ್ಡಿಕ್ ದೇಶಗಳು: ನಾರ್ಡಿಕ್ ದೇಶಗಳು ಉತ್ತರ ಯುರೋಪ್ ಮತ್ತು ಉತ್ತರ ಅಟ್ಲಾಂಟಿಕ್ನಲ್ಲಿರುವ ಭೌಗೋಳಿಕ ಮತ್ತು ಸಾಂಸ್ಕೃತಿಕ ಸಾಮ್ಯತೆ ಹೊಂದಿರುವ ಪ್ರದೇಶವಾಗಿದೆ. ಇದು ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ಸಾರ್ವಭೌಮ ರಾಜ್ಯಗಳನ್ನು ಒಳಗೊಂಡಿದೆ. ಫರೋ ದ್ವೀಪಗಳು ಮತ್ತು ಗ್ರೀನ್ಲ್ಯಾಂಡ್ನ ಸ್ವಾಯತ್ತ ಪ್ರದೇಶಗಳನ್ನು ಸಹ ಒಳಗೊಂಡಿವೆ.