ರಾಜಪಕ್ಸೆ ಆಪ್ತರು ಲಂಕೆ ತೊರೆಯದಂತೆ ತಡೆಯಲು ಏರ್ ಪೋರ್ಟ್ ರಸ್ತೆಯಲ್ಲಿ ಪ್ರತಿಭಟನಾಕಾರರಿಂದ ಚೆಕ್ಪೋಸ್ಟ್ ನಿರ್ಮಾಣ
ಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಿಂಸಾಚಾರ ಮತ್ತು ವ್ಯಾಪಕ ಪ್ರತಿಭಟನೆ ಮುಂದುವರೆದಿದ್ದು ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನವಾಗದಂತೆ ತಡೆಯಲು ಕೊಲಂಬೋದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ...
Published: 10th May 2022 08:16 PM | Last Updated: 11th May 2022 12:58 PM | A+A A-

ಸಂಗ್ರಹ ಚಿತ್ರ
ಕೊಲಂಬೊ: ಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಿಂಸಾಚಾರ ಮತ್ತು ವ್ಯಾಪಕ ಪ್ರತಿಭಟನೆ ಮುಂದುವರೆದಿದ್ದು ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನವಾಗದಂತೆ ತಡೆಯಲು ಕೊಲಂಬೋದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಲಂಕಾದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಚೆಕ್ಪೋಸ್ಟ್ ಸ್ಥಾಪಿಸಿದ್ದಾರೆ.
ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಮಹಿಂದಾ ರಾಜಪಕ್ಸೆ ಬೆಂಬಲಿಗರು ದಾಳಿ ನಡೆಸಿದ ಬೆನ್ನಲ್ಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಇದರ ಬೆನ್ನಲ್ಲೇ 76 ವರ್ಷದ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈ ದಾಳಿಯು ರಾಜಪಕ್ಸೆ ಪರ ರಾಜಕಾರಣಿಗಳ ವಿರುದ್ಧ ವ್ಯಾಪಕ ಹಿಂಸಾಚಾರಕ್ಕೆ ಪ್ರಚೋದಿಸಿತು. ಕಟುನಾಯಕೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಜನರ ದೊಡ್ಡ ಗುಂಪು ಚೆಕ್ಪೋಸ್ಟ್ ಅನ್ನು ಸ್ಥಾಪಿಸಿದೆ. ಅವರು ಆಡಳಿತ ಬಣದ ನಿಷ್ಠಾವಂತರು ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಿಂದ ರಾಜಪಕ್ಸೆ ಅಜ್ಞಾತ ಸ್ಥಳಕ್ಕೆ ಸ್ಥಳಾಂತರ, ಕೊಲೊಂಬೊದಲ್ಲಿ ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ!
ಕೊಲಂಬೊದಲ್ಲಿರುವ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಳೀಯವಾಗಿ ಕಟುನಾಯಕೆ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಮಹಿಂದಾ, ಅವರ ಪತ್ನಿ ಮತ್ತು ಕುಟುಂಬದೊಂದಿಗೆ ಅಧಿಕೃತ ನಿವಾಸ ಟೆಂಪಲ್ ಟ್ರೀಸ್ ನಿಂದ ಪಲಾಯನ ಮಾಡಿದ್ದು ಶ್ರೀಲಂಕಾದ ಈಶಾನ್ಯ ಕರಾವಳಿಯ ಬಂದರು ನಗರವಾದ ಟ್ರಿಂಕೋಮಲಿಯಲ್ಲಿನ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಸೋಮವಾರ ರಾತ್ರಿಯಿಡೀ ಟೆಂಪಲ್ ಟ್ರೀಸ್ ನಿವಾಸಕ್ಕೆ ಪ್ರತಿಭಟನಾಕಾರರ ಗುಂಪು ಪ್ರವೇಶಿಸಲು ಪ್ರಯತ್ನಿಸಿದ್ದು ಅವರನ್ನು ತಡೆಯಲು ಪೊಲೀಸರು ಅಶ್ರುವಾಯು ದಾಳಿ ನಡೆಸಿದ್ದಾರೆ.
ಸೋಮವಾರ, ಹಂಬನ್ತೋಟದಲ್ಲಿರುವ ರಾಜಪಕ್ಸೆ ಅವರ ಪೂರ್ವಜರ ಮನೆ, 14 ಮಾಜಿ ಸಚಿವರು, ಮಾಜಿ ಉಪ ಸ್ಪೀಕರ್ ಸೇರಿದಂತೆ 18 ಶಾಸಕರು ಮತ್ತು ರಾಜಪಕ್ಸೆ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕರ ಮನೆಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದರು.