
ದಕ್ಷಿಣ ಕೊರಿಯಾ ನೂತನ ಅಧ್ಯಕ್ಷ
ಸಿಯೋಲ್: ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷರಾಗಿ ಯೂನ್ ಸುಕ್-ಯೋಲ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಯೋಲ್ ನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ 13ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾದ ಜೊತೆಗೆ ಉದ್ವಿಗ್ನ ವಾತಾವರಣ ಇರುವ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಯೂನ್ ಅವರು ಅಧಿಕಾರ ವಹಿಸಿಕೊಂಡಿದ್ದು, ಉತ್ತರ ಕೊರಿಯಾವನ್ನು ಸಂಪೂರ್ಣ ಅಣ್ವಸ್ತ್ರ ನಾಶ ಮಾಡುವುದಾಗಿ ಘೋಷಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ರಾಷ್ಟ್ರದ ಮೊದಲ ಸಂಪ್ರದಾಯವಾದಿ ಸರ್ಕಾರದ ನಾಯಕ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ ಯೂನ್ ಸುಕ್ ಯೆಯೋಲ್, ಉತ್ತರ ಕೊರಿಯಾ ತನ್ನ ಪರಮಾಣು ಕ್ಷಿಪಣಿ ದಾಳಿಯನ್ನು ಹೆಚ್ಚಿಸಿದ್ದರೂ ಕೂಡ ಅದರ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ.
ದೇಶದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕೊರಿಯಾದಿಂದ ನಿರಂತರ ಬೆದರಿಕೆಯಿದ್ದರೂ ಕೂಡ ಶಾಂತಿಯುತ ಮಾತುಕತೆಯಿಂದಲೇ ಸಮಸ್ಯೆ ಬಗೆಹರಿಸಲು ಸಾಧ್ಯ ಎಂಬುದನ್ನು ಒತ್ತಿ ಹೇಳಿದ್ದಾರೆ.
ಇಂದು ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದೇಶಿ ಗಣ್ಯರೆಂದರೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ದ್ವಿತೀಯ ಪ್ರಜೆ ಎನಿಸಿಕೊಂಡಿರುವ ಡೌಗ್ಲಾಸ್ ಎಂಹಾಫ್ ಮತ್ತು ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ.
ಯೋಲ್ ಅವರು ಸ್ವಾತಂತ್ರ್ಯ ಮತ್ತು ಸುಸ್ಥಿರ ಶಾಂತಿಯ ಅಗತ್ಯ, ಮೌಲ್ಯವನ್ನು ಒತ್ತಿ ಹೇಳಿದರು. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ನಮ್ಮ ಮತ್ತು ಈಶಾನ್ಯ ಏಷ್ಯಾದ ಭದ್ರತೆಗೆ ತಡೆ ಮತ್ತು ಬೆದರಿಕೆಯಾಗಿದ್ದು, ಈ ಬೆದರಿಕೆ ಅಡ್ಡಿಯನ್ನು ಶಾಂತಿಯುತವಾಗಿ ಬಗೆಹರಿಸಲು ಮಾತುಕತೆಯ ಬಾಗಿಲು ಯಾವಾಗಲು ಮುಕ್ತವಾಗಿರುತ್ತದೆ ಎಂದರು.
ಅಣ್ವಸ್ತ್ರ ನಾಶವು ಸುಸ್ಥಿರ ಶಾಂತಿಯನ್ನು ತರಲು ಮತ್ತು ಏಷ್ಯಾ ಜಗತ್ತಿಗೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು "ಮಹಾನ್ ಕೊಡುಗೆ ನೀಡುತ್ತದೆ ಎಂದು ಕೂಡ ನೂತನ ಅಧ್ಯಕ್ಷರು ಹೇಳಿದರು.
ಉತ್ತರ ಕೊರಿಯಾ ಪ್ರಾಮಾಣಿಕವಾಗಿ ಅಣ್ವಸ್ತ್ರ ನಾಶ ಮಾಡಿದರೆ ಉತ್ತರ ಕೊರಿಯಾದ ಆರ್ಥಿಕತೆಯನ್ನು ವ್ಯಾಪಕವಾಗಿ ಬಲಪಡಿಸುವ ಮತ್ತು ಅಲ್ಲಿನ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಧೈರ್ಯಶಾಲಿ ಯೋಜನೆಯನ್ನು ಬಲಪಡಿಸುವ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ, ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ ಅವರು 5 ವರ್ಷ ಆಳ್ವಿಕೆ ನಡೆಸುತ್ತಾರೆ.