ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್
ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ನಿಂದ ನಿಷೇಧಿಸಿರುವ ನಿರ್ಧಾರವನ್ನು ಹಿಂಪಡೆಯುವುದಾಗಿ ಟೆಸ್ಲಾ ಮುಖ್ಯಕಾರ್ಯನಿರ್ವಾಹಕ ಎಲಾನ್ ಮಸ್ಕ್ ಅವರು ಹೇಳಿದ್ದಾರೆ.
Published: 11th May 2022 11:25 AM | Last Updated: 11th May 2022 11:25 AM | A+A A-

ಎಲಾನ್ ಮಸ್ಕ್
ಲಂಡನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ನಿಂದ ನಿಷೇಧಿಸಿರುವ ನಿರ್ಧಾರವನ್ನು ಹಿಂಪಡೆಯುವುದಾಗಿ ಟೆಸ್ಲಾ ಮುಖ್ಯಕಾರ್ಯನಿರ್ವಾಹಕ ಎಲಾನ್ ಮಸ್ಕ್ ಅವರು ಹೇಳಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್ನ ‘ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್’ನಲ್ಲಿ ಮಾತನಾಡಿದ ಎಲಾನ್ ಮಸ್ಕ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ಅಲ್ಲದೆ, ತನ್ನನ್ನು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿರುವ ವ್ಯಕ್ತಿಯೆಂದು ಬಣ್ಣಿಸಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ 'ನಿರ್ಬಂಧ'ಗಳಿಗೆ ಕಡಿವಾಣ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುಮಾರು 88 ಮಿಲಿಯನ್ ಹಿಂಬಾಲಕರನ್ನು (ಫಾಲೋವರ್ಸ್) ಹೊಂದಿರುವ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ರದ್ದುಪಡಿಸಿರುವ ಬಗ್ಗೆ ಈ ಹಿಂದೆ ವಿಶ್ವವ್ಯಾಪಿ ಪರ-ವಿರೋಧ ಚರ್ಚೆ ನಡೆದಿತ್ತು.
ಈ ಬಗ್ಗೆ ಮಾತನಾಡಿರುವ ಮಸ್ಕ್, ಈ ರೀತಿ ರದ್ದು ಮಾಡುವ ಮೂಲಕ ಒಂದು ದೊಡ್ಡ ಸಮುದಾಯವನ್ನೇ ಸಾಮಾಜಿಕ ಜಾಲತಾಣದಿಂದ ದೂರವಿಟ್ಟಂತಾಗಿದೆ. ಇದು ಸರಿಯಾದ ನಿಲುವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಶಾಶ್ವತ ನಿಷೇಧ ನಿಲುವು ಸರಿಯಲ್ಲ ಎಂದು ತಿಳಿಸಿದ್ದಾರೆ.
ಜನವರಿ 6 ರಂದು ಅಮೇರಿಕಾ ರಾಜಧಾನಿಯಲ್ಲಿ ನಡೆದ ಗಲಭೆಯ ನಂತರ ಟ್ರಂಪ್ ಅವರನ್ನು ಟ್ವಿಟರ್ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯಿತು.
‘ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವಿದೆ’ ಎಂದು ಕಾರಣವನ್ನು ನೀಡಿದ್ದ ಟ್ವಿಟರ್, ಟ್ರಂಪ್ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಿತ್ತು.