
ಪ್ರತ್ಯಕ್ಷ ದೃಶ್ಯ
ಗುವೆಟ್ಮಾಲಾ: ಮನುಷ್ಯರಿಗಿಂತ ಪ್ರಾಣಿ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಸಹ ಸಹಾಯಕ್ಕೆ ಮುಂದಾಗುತ್ತವೆ. ಅಥವಾ ತಮ್ಮಿಂದ ಸಹಾಯ ಮಾಡಲು ಸಾಧ್ಯವಿಲ್ಲವೆಂದು ತಿಳಿದು ಬಂದಾಗ ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತವೆ. ಇಂಥದ್ದೇ ಸನ್ನಿವೇಶ ಗುವೆಟ್ಮಾಲಾದ ಮೃಗಾಲಯದಲ್ಲಿ ನಡೆದಿದೆ.
ನೀರಿನಲ್ಲಿ ಹುಲ್ಲೆ ಮುಳುಗುತ್ತಿರುವುದನ್ನು ನೋಡಿದ ಆನೆ ತಕ್ಷಣ ಜಾಗರೂಕವಾಗಿ ಸಹಾಯಕ್ಕಾಗಿ ಇತರರನ್ನ ಕರೆದಿದೆ. ಮೃಗಾಲಯದ ಸಂದರ್ಶಕರಾದ ಮಾರಿಯಾ ಡಯಾಜ್ ಅವರು ಹಂಚಿಕೊಂಡ ವೀಡಿಯೊದ ಪ್ರಕಾರ, ಗುವೆಟ್ಮಾಲಾ ನಗರದ ಲಾ ಅರೋರಾ ಮೃಗಾಲಯದಲ್ಲಿ ತೊಂದರೆಯಲ್ಲಿರುವ ಹುಲ್ಲೆಯನ್ನು ಗಮನಿಸಿದ ತಕ್ಷಣ ಏಷ್ಯನ್ ಆನೆಯು ಜೋರಾಗಿ ಶಬ್ಧ ಮಾಡುತ್ತಾ ಸಹಾಯಕ್ಕಾಗಿ ಇತರರಿಗೆ ಮೊರೆಯಿಟ್ಟಿದೆ.
ಆನೆಯು ತನ್ನ ಸೊಂಡಿಲನ್ನು ಹೆಣಗಾಡುತ್ತಿರುವ ಹುಲ್ಲೆಯ ಕಡೆಗೆ ಬೀಸುತ್ತಿರುವುದನ್ನು ಕಾಣಬಹುದು. ತಕ್ಷಣ ಅಲರ್ಟ್ ಆದ ಝೂ ಕೀಪರ್ ನೀರಿನ ಕಡೆಗೆ ಓಡಿ ಜಿಗಿದು ಭಯಭೀತವಾಗಿದ್ದ ಹುಲ್ಲೆಯನ್ನು ರಕ್ಷಿಸಿದರು.
ಆನೆಗಳು ಹೆಚ್ಚು ಸಹಾನುಭೂತಿ ಹೊಂದಿರುವ ಪ್ರಾಣಿಗಳು. ನಿರ್ದಿಷ್ಟವಾಗಿ ಏಷ್ಯಾದ ಆನೆಗಳು ಇತರ ತೊಂದರೆಗೊಳಗಾದವರಿಗೆ ಸಹಾನುಭೂತಿ ತೋರಿಸಿವೆ ಮತ್ತು ಮೊದಲು ಸಂದರ್ಭಗಳ ಬಗ್ಗೆ ಮಾನವರನ್ನು ಎಚ್ಚರಿಸುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.