ಇಂಧನ ಖರೀದಿಸಲು ಭಾರತದಿಂದ 50 ಕೋಟಿ ಡಾಲರ್ ಸಾಲ ಕೇಳಿದ ಶ್ರೀಲಂಕಾ
ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ 500 ಮಿಲಿಯನ್ ಡಾಲರ್ (50 ಕೋಟಿ ಡಾಲರ್) ಹೆಚ್ಚುವರಿ ಸಾಲವನ್ನು ಕೋರಿದೆ. ಈ ಮೊತ್ತದಿಂದ ಇಂಧನ ಆಮದು...
Published: 25th May 2022 06:05 PM | Last Updated: 25th May 2022 06:05 PM | A+A A-

ಸಾಂದರ್ಭಿಕ ಚಿತ್ರ
ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ 500 ಮಿಲಿಯನ್ ಡಾಲರ್ (50 ಕೋಟಿ ಡಾಲರ್) ಹೆಚ್ಚುವರಿ ಸಾಲವನ್ನು ಕೋರಿದೆ. ಈ ಮೊತ್ತದಿಂದ ಇಂಧನ ಆಮದು ಮಾಡಿಕೊಳ್ಳುವುದು ಶ್ರೀಲಂಕಾದ ಉದ್ದೇಶವಾಗಿದೆ.
ಸೋಮವಾರ ನಡೆದ ಸಭೆಯಲ್ಲಿ ಶ್ರೀಲಂಕಾ ಸರ್ಕಾರವು ಭಾರತವನ್ನು ಸಂಪರ್ಕಿಸಲು ನಿರ್ಧರಿಸಿದೆ ಎಂದು ಡೈಲಿ ಎಫ್‌ಟಿ ಪತ್ರಿಕೆ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನು ಓದಿ: ಶ್ರೀಲಂಕಾ ಅರ್ಥಿಕ ಬಿಕ್ಕಟ್ಟು: ಇಂಧನಕ್ಕಾಗಿ ಪ್ರಜೆಗಳ ಪರದಾಟ; ಪ್ರತಿ ಲೀಟರ್ ಪೆಟ್ರೋಲ್ ಬೆಲೆ 420 ರೂ, ಡೀಸೆಲ್ 400 ರೂ.
ಶ್ರೀಲಂಕಾದ ಇಂಧನ ಸಚಿವ ಕಾಂಚನಾ ವಿಜೆಸೆಕೆರಾ ಅವರು, “ಸೋಮವಾರ ನಡೆದ ಸಂಪುಟ ಸಭೆಯು ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೆಚ್ಚುವರಿಯಾಗಿ $ 500 ಮಿಲಿಯನ್ ಸಾಲವನ್ನು ತೆಗೆದುಕೊಳ್ಳುವ ಪ್ರಸ್ತಾಪವನ್ನು ಅನುಮೋದಿಸಿದ್ದು, ಇಂಧನ ಕೊರತೆಯನ್ನು ಕಡಿಮೆ ಮಾಡಲು ಈ ಮೊತ್ತವನ್ನು ಬಳಸಲಾಗುತ್ತದೆ” ಎಂದು ಹೇಳಿದ್ದಾರೆ.
ಈ ಮೊತ್ತವನ್ನು ಮರುಪಾವತಿಸಲು ಶ್ರೀಲಂಕಾ ಹೆಚ್ಚುವರಿ ಒಂದು ವರ್ಷದೊಂದಿಗೆ ಏಳು ವರ್ಷಗಳ ಕಾಲಾವಕಾಶವನ್ನು ಕೋರಿದೆ ಎಂದು ಕಾಂಚನಾ ವಿಜೆಸೆಕೆರಾ ಅವರು ತಿಳಿಸಿದ್ದಾರೆ.
ಶ್ರೀಲಂಕಾವು ಎಕ್ಸಿಮ್ ಬ್ಯಾಂಕ್‌ನಿಂದ 500 ಮಿಲಿಯನ್ ಡಾಲರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 200 ಮಿಲಿಯನ್ ಡಾಲರ್ ಈಗಾಗಲೇ ಪಡೆದಿದೆ. ಆದರೆ ಜೂನ್‌ನಿಂದ ಇಂಧನ ಆಮದು ಮಾಡಿಕೊಳ್ಳಲು ಶ್ರೀಲಂಕಾಕ್ಕೆ ಸುಮಾರು 53 ಮಿಲಿಯನ್ ಡಾಲರ್ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.