ಇಮ್ರಾನ್ ಖಾನ್ ಹತ್ಯೆ ಯತ್ನ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರಿಂದ ಕಡೆಗೂ ಎಫ್‌ಐಆರ್ ದಾಖಲು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಹತ್ಯೆ ಯತ್ನ ಪ್ರಕರಣ ಸಂಬಂಧ ಪಂಜಾಬ್ ಪ್ರಾಂತ್ಯದ ಪೊಲೀಸರು ಇಂದು ಎಫ್‌ಐಆರ್ ದಾಖಲಿಸಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಹತ್ಯೆ ಯತ್ನ ಪ್ರಕರಣ ಸಂಬಂಧ ಪಂಜಾಬ್ ಪ್ರಾಂತ್ಯದ ಪೊಲೀಸರು ಇಂದು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ನಡೆದ ಕೆಲ ದಿನಗಳ ನಂತರ ಪ್ರಕರಣ ದಾಖಲಿಸಿರುವ ಪೊಲೀಸರು ವಶಕ್ಕೆ ಪಡೆದಿರುವ ದಾಳಿಕೋರನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.

ಇಮ್ರಾನ್ ಖಾನ್ ಮೇಲಿನ ಹತ್ಯೆ ಪ್ರಯತ್ನದ ಸಂಬಂಧ 24 ಗಂಟೆಗಳ ಒಳಗೆ ಎಫ್‌ಐಆರ್ ದಾಖಲಿಸುವಂತೆ ಪಾಕ್ ಸುಪ್ರೀಂ ಕೋರ್ಟ್  ಪ್ರಾಂತೀಯ ಸರ್ಕಾರಕ್ಕೆ ಆದೇಶ ನೀಡಿದ ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ದಾಳಿಕೋರ ನವೀದ್ ಮೊಹಮ್ಮದ್ ಬಶೀರ್‌ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.

ಇನ್ನು ತನ್ನ ಹತ್ಯೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಪಾಕಿಸ್ತಾನದ ಸೇನೆಯ ಹಿರಿಯ ಅಧಿಕಾರಿ ಮೇಜರ್ ಜನರಲ್ ಫೈಸಲ್ ನಸೀರ್ ಅವರ ಹೆಸರನ್ನು ಹೇಳಿದ್ದರು. ಎಫ್ಐಆರ್ ನಲ್ಲಿ ಈ ಮೂವರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿಲ್ಲ.

ನಾವು ಸುಪ್ರೀಂ ಕೋರ್ಟ್‌ನಲ್ಲಿ ಎಫ್‌ಐಆರ್ ಅನ್ನು ಪ್ರಶ್ನಿಸಲಿದ್ದೇವೆ ಎಂದು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ ಹೇಳಿದ್ದಾರೆ. ಪಿಟಿಐ ಚುಕ್ಕಾಣಿ ಹಿಡಿದಿರುವ ಪಂಜಾಬ್ ಪ್ರಾಂತ್ಯದಲ್ಲಿ ಪ್ರಕರಣ ದಾಖಲಾಗಲು ವಿಳಂಬವಾಗುತ್ತಿರುವುದು ಆತಂಕ ಮೂಡಿಸಿದೆ.

ನವೆಂಬರ್ 3ರಂದು ತೆಹ್ರೀಕ್ ಇ ಪಾಕಿಸ್ತಾನ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ವಜೀರಾಬಾದ್‌ನ ಅಲ್ಲಾ ಹೋ ಚೌಕ್ ಬಳಿ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಕಂಟೈನರ್ ಮೇಲೆ ನವೀದ್ ಗುಂಡು ಹಾರಿಸಿದ್ದನು. ಗುಂಡಿನ ದಾಳಿಯಲ್ಲಿ ಇಮ್ರಾನ್ ಖಾನ್ ಬಲಗಾಲಿಗೆ ಗುಂಡು ತಗುಲಿದ್ದು, ಶಸ್ತ್ರಚಿಕಿತ್ಸೆಗೆ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com