ಫೇಸ್ ಬುಕ್ ಮಾತೃಸಂಸ್ಥೆ 'ಮೆಟಾ'ಕ್ಕೆ ಉಗ್ರವಾದಿ ಪಟ್ಟ ಕಟ್ಟಿದ ರಷ್ಯಾ ಸರ್ಕಾರ!

ಖ್ಯಾತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಸಂಸ್ಥೆಯ ಮಾತೃಸಂಸ್ಥೆಯಾದ ‘ಮೆಟಾ ಇಂಕ್’ ಸಂಸ್ಥೆಯನ್ನು ರಷ್ಯಾದಲ್ಲಿ ಉಗ್ರವಾದಿ ಹಾಗೂ ತೀವ್ರಗಾಮಿ ಸಂಸ್ಥೆಯೆಂದು ಘೋಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಸ್ಕೋ: ಖ್ಯಾತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಸಂಸ್ಥೆಯ ಮಾತೃಸಂಸ್ಥೆಯಾದ ‘ಮೆಟಾ ಇಂಕ್’ ಸಂಸ್ಥೆಯನ್ನು ರಷ್ಯಾದಲ್ಲಿ ಉಗ್ರವಾದಿ ಹಾಗೂ ತೀವ್ರಗಾಮಿ ಸಂಸ್ಥೆಯೆಂದು ಘೋಷಿಸಲಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿ ಮೆಟಾವನ್ನು ರಷ್ಯಾ ಭಯೋತ್ಪಾದಕ ಮತ್ತು ತೀವ್ರಗಾಮಿ ಸಂಘಟನೆ ಎಂದು ಘೋಷಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್‌ಗೆ ಸಿಗುತ್ತಿರುವ ಬೆಂಬಲದಿಂದಾಗಿ ರಷ್ಯಾ ಅತೃಪ್ತಿ ಹೊಂದಿದೆ ಎಂದು ಹೇಳಲಾಗಿದೆ.
ರಷ್ಯಾದ ಫೆಡರಲ್ ಸರ್ವೀಸ್ ಫಾರ್ ಫಿನಾನ್ಶಿಯಲ್ ಮಾನಿಟರಿಂಗ್ ಎಂಬ ಸಂಸ್ಥೆಯಲ್ಲಿನ ದತ್ತಾಂಶದಲ್ಲಿ ಮೆಟಾ ಸಂಸ್ಥೆಯನ್ನು ಹೀಗೆ ಘೋಷಿಸಲಾಗಿರುವುದು ಬೆಳಕಿಗೆ ಬಂದಿದೆ.

ಸೋಮವಾರದಿಂದ ಉಕ್ರೇನ್ ಮೇಲೆ ತಾನು ನಡೆಸುತ್ತಿರುವ ಸೇನಾ ದಾಳಿಯನ್ನು ರಷ್ಯಾ ಮತ್ತಷ್ಟು ಹೆಚ್ಚಿಸಿದೆ. ಅದರ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದ್ದು, ಫೆಡರಲ್ ಸರ್ವೀಸ್ ಫಾರ್ ಫಿನಾನ್ಶಿಯಲ್ ಮಾನಿಟರಿಂಗ್ ಸಂಸ್ಥೆಯಲ್ಲಿ ಮೆಟಾ ಸಂಸ್ಥೆಯನ್ನು ರಷ್ಯಾ ವಿರೋಧಿ ಉಗ್ರವಾದಿ ಸಂಸ್ಥೆಯೆಂದು ಘೋಷಿಸಿರುವುದು ಆ ಸಂಸ್ಥೆಗೆ ಸರ್ಕಾರವೇ ಅಧಿಕೃತವಾಗಿ ಉಗ್ರವಾದಿ ಪಟ್ಟ ಕೊಟ್ಟಂತಾಗಿದೆ.

ಇದೇ ವರ್ಷದ ಆರಂಭದಲ್ಲಿ, ರಷ್ಯಾದ ಸ್ಥಳೀಯ ನ್ಯಾಯಾಲಯವೊಂದು ಮೆಟಾ ಸಂಸ್ಥೆಯ ಒಡೆತನದಲ್ಲಿರುವ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಮೆಟಾ ಸಂಸ್ಥೆಯು ಉಗ್ರವಾದಿ ಚಟುವಟಿಕೆಗಳಲ್ಲಿ ನಿರತವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ಫೆಬ್ರವರಿಯಲ್ಲಿ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಐರೋಪ್ಯ ಮೂಲದ ಸಾಮಾಜಿಕ ಜಾಲತಾಣಗಳ ಮೇಲೆ ರಷ್ಯಾ ನ್ಯಾಯಾಂಗ ವ್ಯವಸ್ಥೆ ಅಥವಾ ಅಲ್ಲಿನ ಸರ್ಕಾರ ಇದೇ ರೀತಿಯ ನಿರ್ಧಾರಗಳನ್ನು ಕೈಗೊಂಡಿವೆ.

ಇನ್ನು, ಇದೇ ವರ್ಷದ ಏಪ್ರಿಲ್ ನಲ್ಲಿ ಮೆಟ್ ಸಂಸ್ಥೆಯ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರನ್ನು ರಷ್ಯಾಕ್ಕೆ ಪ್ರವೇಶ ಮಾಡದಂತೆ ರಷ್ಯಾದ ವಿದೇಶಾಂಗ ಇಲಾಖೆ ನಿರ್ಬಂಧ ವಿಧಿಸಿತ್ತು. ಝುಕರ್ ಬರ್ಗ್ ಮಾತ್ರವಲ್ಲ, ಅವರಂತೆಯೇ ಅತಿ ಗಣ್ಯರೆನಿಸಿಕೊಂಡ ಒಟ್ಟು 7 ಮಂದಿಗೆ ರಷ್ಯಾ ಪ್ರವೇಶಿಸದಿರುವಂತೆ ನಿರ್ಬಂಧ ಹೇರಲಾಗಿತ್ತು.

ರಷ್ಯಾದ ಜನರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುವ ವಿಷಯವನ್ನು ಹಂಚಿಕೊಳ್ಳಲು ಮೆಟಾದ ಪ್ಲಾಟ್‌ಫಾರ್ಮ್‌ಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಅವಕಾಶ ನೀಡುತ್ತಿವೆ ಎಂದು ಮಾಸ್ಕೋ ನ್ಯಾಯಾಲಯವು ತೀರ್ಪು ನೀಡಿದೆ. ಉಕ್ರೇನ್‌ನಲ್ಲಿ ಮೆಟಾ ಇದನ್ನು ಮಾಡುತ್ತಿದೆ ಮತ್ತು ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ ಎಂದು ರಷ್ಯಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com