ಪಾಕಿಸ್ತಾನ ಡ್ಯಾಂಗೆ ಸಂಗ್ರಹಿಸಿದ್ದು 40 ಮಿಲಿಯನ್ ಡಾಲರ್, ಜಾಹೀರಾತಿಗೆ ಖರ್ಚು ಮಾಡಿದ್ದು 63 ಮಿಲಿಯನ್ ಡಾಲರ್!

ಪಾಕಿಸ್ತಾನ ಇತ್ತೀಚೆಗೆ ಭೀಕರ ಪ್ರವಾಹವನ್ನು ಅನುಭವಿಸಿದ್ದು, ದೇಶದ ಹಲವು ಪ್ರದೇಶಗಳು ಮುಳುಗಿವೆ. ಹವಾಮಾನ ತಜ್ಞರು ಜಲಪ್ರಳಯಕ್ಕೆ ಮಾನವ ಉಂಟುಮಾಡಿರುವ ಹವಾಮಾನ ಬದಲಾವಣೆಯನ್ನು ದೂಷಿಸಿದರೂ,...
ಉದ್ದೇಶಿತ ಡೈಮರ್-ಭಾಷಾ ಅಣೆಕಟ್ಟು
ಉದ್ದೇಶಿತ ಡೈಮರ್-ಭಾಷಾ ಅಣೆಕಟ್ಟು

ಇಸ್ಲಾಮಾಬಾದ್: ಪಾಕಿಸ್ತಾನ ಇತ್ತೀಚೆಗೆ ಭೀಕರ ಪ್ರವಾಹವನ್ನು ಅನುಭವಿಸಿದ್ದು, ದೇಶದ ಹಲವು ಪ್ರದೇಶಗಳು ಮುಳುಗಿವೆ. ಹವಾಮಾನ ತಜ್ಞರು ಜಲಪ್ರಳಯಕ್ಕೆ ಮಾನವ ಉಂಟುಮಾಡಿರುವ ಹವಾಮಾನ ಬದಲಾವಣೆಯನ್ನು ದೂಷಿಸಿದರೂ, ದೇಶದಲ್ಲಿರುವ ಅಣೆಕಟ್ಟುಗಳ ಕಡೆಗೆ ಬೆರಳುತೋರಿಸಲಾಗುತ್ತಿದೆ.

ವೈಸ್ ನ್ಯೂಸ್‌  ವರದಿಯ ಪ್ರಕಾರ, ಪಾಕ್ ಸರ್ಕಾರ ಸಿಂಧೂ ನದಿಯ ಉದ್ದೇಶಿತ ಡೈಮರ್-ಭಾಷಾ ಅಣೆಕಟ್ಟು ಹಗರಣದಲ್ಲಿ ಸಿಲುಕಿದೆ. ಈ ದೊಡ್ಡ ಅಣೆಕಟ್ಟು ದೇಶಕ್ಕೆ ಪ್ರವಾಹ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಸರ್ಕಾರದ ವರದಿ ಹೇಳಿದೆ.

ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಮಿತಿಯ(PAC)ವರದಿಯ ಪ್ರಕಾರ, ಅಣೆಕಟ್ಟು ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ 40 ಮಿಲಿಯನ್ ಡಾಲರ್ ಸಂಗ್ರಹಿಸಲಾಗಿದೆ. ಆದರೆ 63 ಮಿಲಿಯನ್ ಡಾಲರ್ ಹಣವನ್ನು ಅದರ ಜಾಹೀರಾತಿಗಾಗಿ ಖರ್ಚು ಮಾಡಲಾಗಿದೆ. ಆದರೂ ಅಣೆಕಟ್ಟು ಇನ್ನೂ ಪೂರ್ಣಗೊಂಡಿಲ್ಲ.

ಅಣೆಕಟ್ಟನ್ನು ಮೂಲತಃ 1980 ರ ದಶಕದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಪರಿಸರದ ಪ್ರಭಾವ ಮತ್ತು ಹೆಚ್ಚುತ್ತಿರುವ ವೆಚ್ಚದಂತಹ ಅಂಶಗಳು ಯೋಜನೆಯನ್ನು ವಿಳಂಬಗೊಳಿಸುತ್ತಲೇ ಇವೆ. ನಂತರ 2018 ರಲ್ಲಿ  ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಅವರು ಅಣೆಕಟ್ಟು ನಿರ್ಮಾಣಕ್ಕಾಗಿ ನಿಧಿಯನ್ನು ಸ್ಥಾಪಿಸಿದರು. ಆಗ ಅಣೆಕಟ್ಟು ನಿರ್ಮಾಣ ವೆಚ್ಚವು 14 ಬಿಲಿಯನ್‌ ಡಾಲರ್ ಗೆ ಏರಿತ್ತು. ಸಾಕಿಬ್ ನಿಸಾರ್ ಅವರು ಪಾಕಿಸ್ತಾನದ ಜನರಿಂದ ದೇಣಿಗೆ ಪಡೆಯಲು ನಿಧಿಯನ್ನು ಸ್ಥಾಪಿಸಿದರು. ಅವರು ಅಣೆಕಟ್ಟಿನ ನಿರ್ಮಾಣಕ್ಕೆ ಅಗತ್ಯವಿರುವ 1ಬಿಲಿಯನ್ ಮೊತ್ತವನ್ನು ಒದಗಿಸುತ್ತಾರೆ ಎಂದು ವೈಸ್ ನ್ಯೂಸ್ ವರದಿ ಹೇಳಿದೆ. ಆ ವೇಳೆ ಸಾರ್ವಜನಿಕರಿಂದ ಮಾತ್ರವಲ್ಲದೆ ದೇಶದ ಕ್ರಿಕೆಟ್ ತಂಡ ಮತ್ತು ಉನ್ನತ ಸಂಗೀತಗಾರರಿಂದ ಕೊಡುಗೆಗಳು ಹರಿದುಬಂದವು. ಸೈನ್ಯ ಮತ್ತು ಹಲವಾರು ಸರ್ಕಾರಿ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ನೀಡಲು ಮುಂದಾದರು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ನಿಧಿಯ ಜಂಟಿ ನಾಯಕತ್ವವನ್ನು ವಹಿಸಿಕೊಂಡರು.

ಸಾಕಿಬ್ ನಿಸಾರ್ 2019 ರಲ್ಲಿ ನಿವೃತ್ತರಾದಾಗ  6.3 ಬಿಲಿಯನ್ ಡಾಲರ್ ಕೊರತೆ ಇತ್ತು ಎಂದು ವೈಸ್ ನ್ಯೂಸ್ ಹೇಳಿದೆ. ಆದರೆ ಅವರ ತಾಜಾ ಹೇಳಿಕೆ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈಗ ನಿವೃತ್ತರಾಗಿರುವ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು ಈ ನಿಧಿಯು ನಿಜವಾಗಿಯೂ ಅಣೆಕಟ್ಟನ್ನು ನಿರ್ಮಿಸಲು ಎಂದಿಗೂ ಉದ್ದೇಶಿಸಿಲ್ಲ. ಬದಲಾಗಿ ಜಾಗೃತಿ ಮೂಡಿಸಲು ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ಆರೋಪಗಳು ಹೊರಹೊಮ್ಮುತ್ತಿದ್ದಂತೆ ಅನೇಕ ಪ್ರಭಾವಿಗಳು ಜಂಟಿ ಉದ್ಯಮದ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಅಹ್ಸಾನ್ ಇಕ್ಬಾಲ್, ಅಣೆಕಟ್ಟು ನಿಧಿಗಾಗಿ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಜಾಹೀರಾತಿಗಾಗಿ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಮಿತಿಯ(PAC) ಕಳೆದ ತಿಂಗಳು ಸಾಕಿಬ್ ನಿಸಾರ್ ಅವರ ಅವಧಿಯಲ್ಲಿ ಸ್ಥಾಪಿಸಲಾದ ಅಣೆಕಟ್ಟು ನಿಧಿಯ ಬಗ್ಗೆ ವಿವರಣೆ ನೀಡಲು ಅವರಿಗೆ ಸಮನ್ಸ್ ನೀಡಿತ್ತು.

ಡೈಮರ್-ಭಾಷಾ ಅಣೆಕಟ್ಟು 272 ಮೀಟರ್ ಎತ್ತರದಲ್ಲಿ ನಿರ್ಮಾಣವಾಗಲಿದ್ದು, ಅಧಿಕಾರಿಗಳ ಪ್ರಕಾರ ಇದು 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com