ರಷ್ಯಾದ ಶಾಲೆಯಲ್ಲಿ ಗುಂಡಿನ ದಾಳಿ: 7 ಮಕ್ಕಳು ಸೇರಿ 13 ಮಂದಿ ಸಾವು, ಬಂದೂಕುಧಾರಿ ತಾನೂ ಆತ್ಮಹತ್ಯೆ

ಮಧ್ಯ ರಷ್ಯಾದ ಶಾಲೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 7 ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಮತ್ತು ಇಪ್ಪತ್ತೊಂದು ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಾಸ್ಕೊ: ಮಧ್ಯ ರಷ್ಯಾದ ಶಾಲೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 7 ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಮತ್ತು ಇಪ್ಪತ್ತೊಂದು ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇಝೆವ್ಸ್ಕ್ ನಗರದ ಶಾಲೆ ಸಂಖ್ಯೆ 88 ರಲ್ಲಿ ಗುಂಡಿನ ದಾಳಿ ನಡೆದಿದ್ದು, ಶಾಲೆಯಲ್ಲಿ ಸುಮಾರು 1000 ವಿದ್ಯಾರ್ಥಿಗಳು ಮತ್ತು 80 ಶಿಕ್ಷಕರು ಇದ್ದಾರೆ ಎಂದು ತಿಳಿದುಬಂದಿದೆ.

ದಾಳಿಕೋರನು ಮಕ್ಕಳ ಮೇಲೆ ಗುಂಡು ಹಾರಿಸಲು ಮುಂದಾಗುವ ಮುನ್ನ ಶಾಲೆಯಲ್ಲಿನ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾನೆ ಎಂದು ಮಾಧ್ಯಮ ವರದಿ ಮಾಡಿವೆ.

ಬಳಿಕ ಮಕ್ಕಳ ಮೇಲೂ ದಾಳಿ ನಡೆಸಿ, ಶಾಲೆಯ ತರಗತಿಯೊಂದರಲ್ಲಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂತರ ವರದಿಯಾಗಿದೆ.

ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಶವ ಇದೀಗ ಪೊಲೀಸರಿಗೆ ಪತ್ತೆಯಾಗಿದೆ.

ವರದಿಗಳ ಪ್ರಕಾರ, ಬಂದೂಕುಧಾರಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಮತ್ತು 14 ಮಕ್ಕಳು ಸೇರಿದಂತೆ ಸುಮಾರು 21 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಟೆಲಿಗ್ರಾಮ್‌ನಲ್ಲಿ ತಿಳಿಸಿದೆ.

ಈ ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬ್ರೆಚಲೋವ್, ಗಾಯಗೊಂಡವರಲ್ಲಿ ಮಕ್ಕಳು ಇದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ಟಿವಿ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಶಾಲೆಯಲ್ಲಿನ ಗಾಯಾಳುಗಳನ್ನು ಸ್ಥಳಾಂತರಿಸುವುದು ಮತ್ತು ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ.

6,40,000 ಜನಸಂಖ್ಯೆಯನ್ನು ಹೊಂದಿರುವ ಇಝೆವ್ಸ್ಕ್ ನಗರವು ಉಡ್ಮುರ್ಟಿಯಾ ಪ್ರದೇಶದ ರಾಜಧಾನಿಯಾಗಿದ್ದು, ಉರಲ್ ಪರ್ವತಗಳ ಪಶ್ಚಿಮಕ್ಕೆ, ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 960 ಕಿಲೋಮೀಟರ್ ದೂರದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com