ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ 'ಸುರಾಯಿ' ಕಲಾಕೃತಿ ಉಡುಗೊರೆ ನೀಡಿದ ಪ್ರಧಾನಿ ಮೋದಿ
ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಕೆಲವು ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
Published: 25th August 2023 12:50 PM | Last Updated: 25th August 2023 12:51 PM | A+A A-

ಸುರಾಯಿ ಕಲಾಕೃತಿ
ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ಕೆಲವು ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ತೆಲಂಗಾಣದಿಂದ ತಯಾರಾದ 'ಸುರಾಯಿ' ಕಲಾಕೃತಿಯನ್ನು ಮತ್ತು ಅವರ ಪತ್ನಿಗೆ ವಿಶೇಷವಾದ ನಾಗಾಲ್ಯಾಂಡ್ ನ ಶಾಲನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಕರ್ನಾಟಕದ ಬೀದರ್ ನಲ್ಲಿ ತಯಾರಾಗುವ ಸತು, ತಾಮ್ರ ಮತ್ತಿತರ ನಾನ್ ಫೆರಸ್ ಮಿಶ್ರಲೋಹಗಳಿಂದ ತಯಾರಾದ ಬಿದ್ರಿ ಹೂದಾನಿಯನ್ನು ನೀಡಿದ್ದಾರೆ.
ನಾಗಾ ಶಾಲುಗಳು ನಾಗಾಲ್ಯಾಂಡ್‌ನಲ್ಲಿರುವ ಬುಡಕಟ್ಟು ಜನಾಂಗದವರಿಂದ ನೇಯ್ದ ಜವಳಿ ಕಲೆಯ ಒಂದು ಸೊಗಸಾದ ರೂಪವಾಗಿದೆ. ಈ ಶಾಲುಗಳು ಆಕರ್ಷಕ ಬಣ್ಣಗಳು, ಸಂಕೀರ್ಣ ವಿನ್ಯಾಸಗಳು ಮತ್ತು ಸಾಂಪ್ರದಾಯಿಕ ನೇಯ್ಗೆ ತಂತ್ರಗಳ ಬಳಕೆಗೆ ಹೆಸರುವಾಸಿಯಾಗಿದೆ, ಇವುಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ. ಪ್ರತಿಯೊಂದು ನಾಗಾ ಶಾಲು ಬುಡಕಟ್ಟು ಜನಾಂಗದ ಇತಿಹಾಸ, ನಂಬಿಕೆಗಳು ಮತ್ತು ಜೀವನ ವಿಧಾನವನ್ನು ಪ್ರತಿಬಿಂಬಿಸುವ ವಿಶಿಷ್ಟ ಕಥೆಯನ್ನು ಹೇಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರಿಗೆ ಮೋದಿ ಅವರು ಮಧ್ಯಪ್ರದೇಶದ ಗೊಂಡ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಗೊಂಡ ವರ್ಣಚಿತ್ರಗಳು ಬುಡಕಟ್ಟು ಜನಾಂಗದ ಅತ್ಯಂತ ಮೆಚ್ಚುಗೆ ಪಡೆದ ಕಲಾ ಪ್ರಕಾರವಾಗಿದೆ ಎಂದು ಅವರು ತಿಳಿಸಿದರು.