ವಿದೇಶಕ್ಕೆ ಪ್ರಯಾಣಿಸುವ ತನ್ನ ನಾಗರಿಕರ ಮೇಲೆ ಕೋವಿಡ್ ನಿರ್ಬಂಧ; ಹಲವು ದೇಶಗಳ ಕ್ರಮವನ್ನು ಖಂಡಿಸಿದ ಚೀನಾ

ಕೋವಿಡ್-19 ಪ್ರಕರಣಗಳ ಏಕಾಏಕಿ ಉಲ್ಭಣದ ಹಿನ್ನೆಲೆಯಲ್ಲಿ ಹಲವಾರು ದೇಶಗಳು ವಿಧಿಸಿರುವ ತನ್ನ ನಾಗರಿಕರ ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಚೀನಾ ಸರ್ಕಾರ ಮಂಗಳವಾರ ಖಂಡಿಸಿದೆ ಮತ್ತು ಇದಕ್ಕೆ ಪ್ರತಿಯಾಗಿ ತಾವೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೀಜಿಂಗ್: ಕೋವಿಡ್-19 ಪ್ರಕರಣಗಳ ಏಕಾಏಕಿ ಉಲ್ಭಣದ ಹಿನ್ನೆಲೆಯಲ್ಲಿ ಹಲವಾರು ದೇಶಗಳು ವಿಧಿಸಿರುವ ತನ್ನ ನಾಗರಿಕರ ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಚೀನಾ ಸರ್ಕಾರ ಮಂಗಳವಾರ ಖಂಡಿಸಿದೆ ಮತ್ತು ಇದಕ್ಕೆ ಪ್ರತಿಯಾಗಿ ತಾವೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, 'ಕೆಲವು ದೇಶಗಳು ವಿಧಿಸಿರುವ 'ಚೀನಾದ ಪ್ರಯಾಣಿಕರನ್ನು ಮಾತ್ರ ಗುರಿಯಾಗಿಸುವ ಪ್ರವೇಶ ನಿರ್ಬಂಧಗಳು' ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಮತ್ತು ಈ ರೀತಿಯ ಕೆಲವು ನಿರ್ಬಂಧಗಳು ಸ್ವೀಕಾರಾರ್ಹವಲ್ಲ' ಎಂದು ಹೇಳಿದರು.

ಚೀನಾ ಕೂಡ 'ಪರಸ್ಪರ ತತ್ವದ ಆಧಾರದ ಮೇಲೆ ಪ್ರತಿಕ್ರಮಗಳನ್ನು ತೆಗೆದುಕೊಳ್ಳಬಹುದು' ಎಂದು ಮಾವೋ ಎಚ್ಚರಿಸಿದರು.

ಭಾರತ ಮತ್ತು ಅಮೆರಿಕ ಸೇರಿದಂತೆ ಹಲವಾರು ದೇಶಗಳು ಚೀನಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಪ್ರಯಾಣಿಸುವ ಜನರ ಮೇಲೆ ಕಡ್ಡಾಯವಾಗಿ ನಿರ್ಗಮನ ಪೂರ್ವ ಕೋವಿಡ್ ಪರೀಕ್ಷೆಗೆ ಸೂಚಿಸಿದೆ.

ಭಾರತವು ಸೋಮವಾರ ಚೀನಾ, ಸಿಂಗಾಪುರ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್‌ನಿಂದ ಆಗಮಿಸುವ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೇಲಿನ ಯಾವುದೇ ದೇಶದಿಂದ ನಿರ್ಗಮನಕ್ಕೂ ಮೊದಲು 72 ಗಂಟೆಗಳ ಒಳಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಿರಬೇಕು. ಯಾವುದೇ ಭಾರತೀಯ ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ಮೂಲ ದೇಶಗಳನ್ನು ಲೆಕ್ಕಿಸದೆ ಈ ಮೇಲಿನ ದೇಶಗಳ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೂ ಇದು ಅನ್ವಯಿಸುತ್ತದೆ ಎಂದು ಹೇಳಿದೆ.

ಕಳೆದ ವಾರ, ಅಮೆರಿಕದ ಆರೋಗ್ಯ ಇಲಾಖೆಯು 2023ರ ಜನವರಿ 5 ರಂದು 12.01 ರಿಂದ ಚೀನಾ, ಹಾಂಗ್ ಕಾಂಗ್ ಮತ್ತು ಮಕಾವುಗಳಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ತರುವ ಅಗತ್ಯವಿದೆ ಎಂದು ಘೋಷಿಸಿತು.

ಪರೀಕ್ಷೆಗಳು ಆರ್‌ಟಿ-ಪಿಸಿಆರ್ ಆಗಿರಬಹುದು ಅಥವಾ ಟೆಲಿಹೆಲ್ತ್ ಸೇವೆಯ ಮೂಲಕ ನಿರ್ವಹಿಸಲ್ಪಡುವ ಪ್ರತಿಜನಕ ಸ್ವಯಂ-ಪರೀಕ್ಷೆಯಾಗಿರಬಹುದು. ಪ್ರಯಾಣಿಕರು ಹೊರಡುವ ಎರಡು ದಿನಗಳ ಮೊದಲು ಈ ಪರೀಕ್ಷೆಗೆ ಒಳಪಟ್ಟಿರಬೇಕು ಎಂದು ಹೇಳಿದೆ.

ಯುಕೆ, ದಕ್ಷಿಣ ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಇಸ್ರೇಲ್ ಸೇರಿದಂತೆ ಇತರ ಕೆಲವು ದೇಶಗಳು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿವೆ.

ಸುಮಾರು ಮೂರು ವರ್ಷಗಳ ನಿರ್ಬಂಧಗಳ ನಂತರ ಮೊದಲ ಬಾರಿಗೆ ದೇಶಕ್ಕೆ ಮತ್ತು ಹೊರಗಿನ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಚೀನಾ ಘೋಷಿಸಿದ ನಂತರ ಈ ಬೆಳವಣಿಗೆಗಳು ಬಂದಿವೆ.

ಜನವರಿ 8 ರಿಂದ, ಚೀನಾಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ಕೊನೆಗೊಳ್ಳುತ್ತದೆ ಮತ್ತು ಚೀನಾದ ನಾಗರಿಕರಿಗೆ ಪಾಸ್‌ಪೋರ್ಟ್ ಅರ್ಜಿಗಳು ಪುನರಾರಂಭಗೊಳ್ಳುತ್ತವೆ. ಈಮಧ್ಯೆ, ಚೀನಾದಲ್ಲಿ ದೈನಂದಿನ ಪ್ರಕರಣಗಳು ಮತ್ತು ಸಾವುಗಳ ನಿಜವಾದ ಸಂಖ್ಯೆ ತಿಳಿದಿಲ್ಲ. ಏಕೆಂದರೆ ಅಧಿಕಾರಿಗಳು ಮಾಹಿತಿಯನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದ್ದಾರೆ.

ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಮತ್ತು ವೃದ್ಧರು ಸಾಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com