'ಕದನ ವಿರಾಮ'ವಿದ್ದರೂ ಸಾಂಪ್ರದಾಯಿಕ ಕ್ರಿಸ್‌ಮಸ್‌ ದಿನದಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ, ಇಬ್ಬರು ಸಾವು

ಉಕ್ರೇನ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಕದನ ವಿರಾಮ ಘೋಷಿಸಿದ್ದರು ಕೂಡ ಇಬ್ಬರು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ಆಡಳಿತ ಭಾನುವಾರ ತಿಳಿಸಿದೆ.
ರಷ್ಯಾದ ಪಡೆಗಳಿಂದ ನಾಶವಾದ ಆರ್ಥೊಡಕ್ಸ್ ಚರ್ಚ್‌ನ ಮುಂದೆ ಒಂದು ಕ್ಯುಪೋಲಾ. (ಫೋಟೋ ; ಎಪಿ)
ರಷ್ಯಾದ ಪಡೆಗಳಿಂದ ನಾಶವಾದ ಆರ್ಥೊಡಕ್ಸ್ ಚರ್ಚ್‌ನ ಮುಂದೆ ಒಂದು ಕ್ಯುಪೋಲಾ. (ಫೋಟೋ ; ಎಪಿ)

ಕೀವ್: ಉಕ್ರೇನ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಕದನ ವಿರಾಮ ಘೋಷಿಸಿದ್ದರು ಕೂಡ ಇಬ್ಬರು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ಆಡಳಿತ ಭಾನುವಾರ ತಿಳಿಸಿದೆ.

'ರಷ್ಯಾದ ಸಶಸ್ತ್ರ ಆಕ್ರಮಣದ' ಪರಿಣಾಮವಾಗಿ ಕಳೆದ 24 ಗಂಟೆಗಳಲ್ಲಿ ಡೊನೆಟ್ಸ್ಕ್‌ನ ಪೂರ್ವ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೊ ಭಾನುವಾರ ಹೇಳಿದ್ದಾರೆ.

ಖಾರ್ಕಿವ್‌ನ ಈಶಾನ್ಯ ಪ್ರದೇಶದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದು, ಅದೇ ಅವಧಿಯಲ್ಲಿ ಖೆರ್ಸನ್‌ನ ದಕ್ಷಿಣ ಪ್ರದೇಶದಲ್ಲಿ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಟಿಮೊಶೆಂಕೊ ತಿಳಿಸಿದ್ದಾರೆ.

ರಷ್ಯಾದ ಆಕ್ರಮಣಕಾರರು ಘೋಷಿಸಿದ 'ಕದನ ವಿರಾಮ'ದ ಹೊರತಾಗಿಯೂ, ಒಂಬತ್ತು ಕ್ಷಿಪಣಿ ಮತ್ತು ಮೂರು ವೈಮಾನಿಕ ದಾಳಿಗಳನ್ನು ಅವರು ನಡೆಸಿದ್ದಾರೆ. ಬಹು ರಾಕೆಟ್ ಲಾಂಚರ್‌ಗಳಿಂದ 40 ದಾಳಿಗಳನ್ನು ನಡೆಸಿದ್ದಾರೆ. ಈ ದಾಳಿಯಿಂದಾಗಿ ನಿರ್ದಿಷ್ಟವಾಗಿ, ನಾಗರಿಕ ಮೂಲಸೌಕರ್ಯಕ್ಕೆ ಹೊಡೆತ ಬಿದ್ದಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಸಂಪ್ರದಾಯಸ್ಥ ಕ್ರೈಸ್ತರು ಜ. 6 ಹಾಗೂ 7ರಂದು ಕ್ರಿಸ್‌ಮಸ್‌ ಆಚರಿಸುತ್ತಾರೆ. ಹೀಗಾಗಿ ಆಚರಣೆಗೆ ಅವಕಾಶ ನೀಡಲು ಪುಟಿನ್ 36 ಗಂಟೆಗಳ ಕದನ ವಿರಾಮವನ್ನು ಘೋಷಿಸಿದ್ದರು. ಜನವರಿ 6ರಂದು ಮಧ್ಯಾಹ್ನ 12 ರಿಂದ ಘೋಷಿಸಲಾಗಿದ್ದ ಕದನ ವಿರಾಮ ಶನಿವಾರದಂದು ಕೀವ್‌ನಲ್ಲಿ ರಾತ್ರಿ 11 ಗಂಟೆಗೆ ಕೊನೆಗೊಂಡಿತು.

'ಮಧ್ಯರಾತ್ರಿಯ ನಂತರ ಶತ್ರುಗಳು ಕ್ರಾಮಾಟೋರ್ಸ್ಕ್ ಮೇಲೆ ಏಳು ರಾಕೆಟ್ ದಾಳಿಗಳನ್ನು ಮತ್ತು ಕೊಸ್ಟ್ಯಾಂಟಿನಿವ್ಕಾ ಮೇಲೆ ಎರಡು ದಾಳಿ ನಡೆಸಿದರು' ಎಂದು ಡೊನೆಟ್ಸ್ಕ್‌ನ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಪಾವ್ಲೊ ಕೈರಿಲೆಂಕೊ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com