ನೇಪಾಳ: ಪತನಗೊಂಡಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ

ನೇಪಾಳದಲ್ಲಿ ನಿನ್ನೆ 72 ಜನರ ಸಜೀವ ಆಹುತಿಗೆ ಕಾರಣವಾದ ಪತನಗೊಂಡ ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ದೊರಕಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ಪತನಗೊಂಡಿರುವ ಸ್ಥಳ.
ವಿಮಾನ ಪತನಗೊಂಡಿರುವ ಸ್ಥಳ.

ಕಠ್ಮಂಡು: ನೇಪಾಳದಲ್ಲಿ ನಿನ್ನೆ 72 ಜನರ ಸಜೀವ ಆಹುತಿಗೆ ಕಾರಣವಾದ ಪತನಗೊಂಡ ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ದೊರಕಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಠ್ಮುಂಡುವಿನಿಂದ ಆಗಮಿಸಿದ ಅವಳಿ ಎಂಜಿನ್‌ ಎಟಿಆರ್‌72 ವಿಮಾನವು ಪೋಖರಾದಲ್ಲಿ ಇಳಿಯುವ ಕೆಲವು ನಿಮಿಷಗಳ ಮೊದಲು ಪತನಗೊಂಡಿದೆ.

ಅಪಘಾತಗೊಂಡ ಸ್ಥಳದಿಂದ ಇಲ್ಲಿಯವರೆಗೆ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ವಿಮಾನವು ಪತನಗೊಳ್ಳುವ ಮೊದಲ ಪ್ರಮುಖ ಮಾಹಿತಿಗಳನ್ನು ಹೊಂದಿರುವ ಬ್ಲ್ಯಾಕ್‌ ಬಾಕ್ಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲ್ಯಾಕ್‌ ಬಾಕ್ಸ್‌ ವಿಮಾನದ ಡೇಟಾ ರೆಕಾರ್ಡರ್‌ ಆಗಿದ್ದು, ಅದು ವಿಶೇಷ ಅಲ್ಗಾರಿದಮ್‌ ಮೂಲಕ ವಿಮಾನದ ಎಲ್ಲಾ ಮಾಹಿತಿಗಳನ್ನು ದಾಖಲಿಸುತ್ತದೆ.

ಅಪಘಾತಗೊಂಡ ವಿಮಾನಗಳ ಕೊನೆಕ್ಷಣದ ಮಾಹಿತಿ ಪಡೆಯಲು ಈ ಬ್ಲ್ಯಾಕ್‌ ಬಾಕ್ಸ್‌'ನ್ನು ಬಳಸಲಾಗುತ್ತದೆ. 1950 ರ ದಶಕದಿಂದಲೇ ವಿಮಾನ ಅಪಘಾತಗಳ ಕಾರಣಗಳನ್ನು ಪತ್ತೆಹಚ್ಚುವಲ್ಲಿ ಬ್ಲ್ಯಾಕ್ ಬಾಕ್ಸ್ ಅಥವಾ ಕಪ್ಪು ಪೆಟ್ಟಿಗೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಆಸ್ಟ್ರೇಲಿಯಾದ ವಿಜ್ಞಾನಿ ಡೇವಿಡ್ ವಾರೆನ್ ಅವರು ವಿಮಾನದಲ್ಲಿನ ಭದ್ರತಾ ಲೋಪ ದೋಷಗಳನ್ನು ಗುರುತಿಸಲು ಬ್ಲ್ಯಾಕ್ ಬಾಕ್ಸ್ ಪರಿಕಲ್ಪನೆಯನ್ನು ಅಭಿವೃದ್ದಿಪಡಿಸಿದರು.

ವಿಮಾನದ ಕಪ್ಪು ಪೆಟ್ಟಿಗೆಯು ಇವುಗಳು ರೆಕಾರ್ಡರ್‌ಗಳನ್ನು ಒಳಗೊಂಡಿರುವ ಎರಡು ದೊಡ್ಡ ಲೋಹದ ಪೆಟ್ಟಿಗೆಗಳಾಗಿವೆ. ಸಾಮಾನ್ಯವಾಗಿ ವಿಮಾನವೊಂದರಲ್ಲಿ ಎರಡು ಇಂತಹ ಪೆಟ್ಟಿಗೆಗಳು ಇರುತ್ತವೆ. ಒಂದು ಪೆಟ್ಟಿಗೆಯನ್ನು ವಿಮಾನದ ಮುಂಭಾಗದಲ್ಲಿ ಮತ್ತು ಇನ್ನೊಂದು ಹಿಂಭಾಗದಲ್ಲಿ ಇರಿಸಬೇಕಾಗುತ್ತದೆ. ಈ ರೆಕಾರ್ಡರ್‌ಗಳು ವಿಮಾನ ಹಾರಾಟದ ಬಗ್ಗೆ ಮಾಹಿತಿಯನ್ನು ದಾಖಲಿಸುತ್ತವೆ ಮತ್ತು ವಿಮಾನ ಅಪಘಾತಕ್ಕೆ ಕಾರಣವಾಗುವ ಘಟನೆಗಳನ್ನು ಪುನರ್‌ನಿರ್ಮಿಸಲು ಸಹಾಯ ಮಾಡುತ್ತದೆ.

ಯಾರೊಬ್ಬರೂ ಬದುಕುಳಿದಿಲ್ಲ: ಅಧಿಕಾರಿಗಳು
ಈ ನಡುವೆ ವಿಮಾನ ಪತನ ದುರಂತದಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಯಾರೂ ಕೂಡ ಬದುಕುಳಿದಿಲ್ಲ ಎಂದು ನೇಪಾಳ ಸೇನೆ ಮಾಹಿತಿ ನೀಡಿದೆ.

ನಮಗೆ ಜೀವಂತವಾಗಿ ಯಾರನ್ನೂ ಉಳಿಸಲು ಸಾಧ್ಯವಾಗಲಿಲ್ಲ ಎಂದು ನೇಪಾಳದ ಸೇನೆಯ ವಕ್ತಾರ ಕೃಷ್ಣ ಪ್ರಸಾದ್‌ ಭಂಡಾರಿ ಮಾಹಿತಿ ನೀಡಿದ್ದಾರೆ.

ಪೋಖರಾದಲ್ಲಿ ಹೊಸದಾಗಿ ಉದ್ಘಾಟನೆಯಾದ ವಿಮಾನ ನಿಲ್ದಾಣಕ್ಕೆ ಲ್ಯಾಂಡ್‌ ಆಗುವ ಸಮಯದಲ್ಲಿ ಯೇತಿ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನವು ನದಿಯ ಕಮರಿಗೆ ಉರುಳಿತ್ತು. ಆ ವಿಮಾನದಲ್ಲಿ 72 ಜನರಿದ್ದರು. ಅವರಲ್ಲಿ 5 ಜನರು ಭಾರತೀಯರು ಇದ್ದರು. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ ಯೆಟಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಕಾಠ್ಮಂಡುವಿನಿಂದ ಟ್ರಿಬುವನ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗೆ ಪ್ರಯಾಣಿಸಲು ಬೆಳಗ್ಗೆ 10:33 ಗಂಟೆಗೆ ಟೇಕಾಫ್‌ ಆಗಿತ್ತು.

ಪೋಖಾರದಲ್ಲಿ ವಿಮಾನ ದುರಂತ ನಡೆದ ತಕ್ಷಣ ನೇಪಾಳದ ಪ್ರಧಾನ ಮಂತ್ರಿ ಪ್ರಚಂಡ ಅವರು ತುರ್ತು ಸಭೆ ಕರೆದಿದ್ದರು. ದುರಂತದಲ್ಲಿ ಮಡಿದವರಲ್ಲಿ ಹದಿನೈದು ವಿದೇಶಿ ಪ್ರಜೆಗಳಿದ್ದಾರೆ. 53 ನೇಪಾಳಿಗರು ಮರಣ ಹೊಂದಿದ್ದಾರೆ. ಭಾರತದ ಅಭಿಷೇಕ್‌ ಖುಶ್ವಾಹ, ಬಿಶಾಲ್‌ ಶರ್ಮಾ, ಅನಿಲ್‌ ಕುಮಾರ್‌ ರಾಜ್‌ಬರ್‌, ಸೋನು ಜೈಸ್ವಾಲ್‌ ಮತ್ತು ಸಂಜಯಾ ಜೈಸ್ವಾಲ್‌ ದುರಂತಕ್ಕೆ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com