
ಇರಿತಕ್ಕೋಳಗಾದ ಬಾಲಕ
ಮೆಲ್ಬೋರ್ನ್: ಮೆಲ್ಬೋರ್ನ್‌ನಲ್ಲಿ 16 ವರ್ಷದ ಭಾರತೀಯ ಮೂಲದ ಬಾಲಕನೊಬ್ಬನಿಗೆ ಆತನ ಹುಟ್ಟುಹಬ್ಬದ ದಿನವೇ ಚೂರಿ ಇರಿದು ದರೋಡೆ ಮಾಡಲಾಗಿದೆ.
ಟಾರ್ನೈಟ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ರಿಯಾನ್ ಸಿಂಗ್ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದಾಗ ಗುಂಪೊಂದು ಹೊಂಚು ಹಾಕಿ ಅಪ್ರಚೋದಿತ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುಮಾರು ಏಳರಿಂದ ಎಂಟು ಜನರ ಗುಂಪು ಮೂವರ ಮೇಲೆ ದಾಳಿ ನಡೆಸಿತು. ಈ ವೇಳೆ ಮೂವರು ತಮ್ಮ ಮೊಬೈಲ್ ಫೋನ್‌ಗಳನ್ನು ನೀಡುವಂತೆ ಒತ್ತಾಯಿಸಿದರು. ರಿಯಾನ್ ಧರಿಸಿದ್ದ ಹೊಸ ನೈಕ್ ಏರ್ ಜೋರ್ಡಾನ್ ಶೂಗಳನ್ನು ಬಿಚ್ಚಿಕೊಡುವಂತೆ ಕೇಳಿದ್ದಾರೆ.
ಕ್ರಿಕೆಟಿಗನಾಗಬೇಕು ಎಂಬ ಹಂಬಲ ಹೊಂದಿದ್ದ ರಿಯಾನ್ ಸಿಂಗ್ ಪಕ್ಕೆಲುಬುಗಳು, ತೋಳುಗಳು, ಕೈ ಮತ್ತು ಬೆನ್ನಿಗೆ ಇರಿಯಲಾಗಿದ್ದು ಆತನ ತಲೆಯ ಹಿಂಭಾಗಕ್ಕೆ ಪೆಟ್ಟಾಗಿದೆ ಎಂದು ವರದಿ ತಿಳಿಸಿದೆ.
ಘಟನೆ ವೇಳೆ ಅಪರಾಧಿಗಳು ಸ್ಥಳದಿಂದ ಹೊರಹೋಗುವ ಮೊದಲು ಹಲವಾರು ಬಾರಿ ಯುವಕರಿಗೆ ಇರಿದಿದ್ದಾರೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ದುಷ್ಕರ್ಮಿಗಳು ಕಡುಬಣ್ಣದ ವಾಹನದಲ್ಲಿ ಸ್ಥಳದಿಂದ ತೆರಳಿದ್ದು, ಅದು ಇನ್ನೂ ಪತ್ತೆಯಾಗಿಲ್ಲ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸುತ್ತಲಿನ ನಿಖರವಾದ ಸಂದರ್ಭಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.