ಒಡಿಶಾ ರೈಲು ದುರಂತ: ಆಸ್ಟ್ರೇಲಿಯಾ, ಪಾಕ್ ಸೇರಿ ಹಲವು ರಾಷ್ಟ್ರಗಳ ನಾಯಕರಿಂದ ತೀವ್ರ ಸಂತಾಪ

ಒಡಿಶಾ ಬಾಲಸೋರ್'ನಲ್ಲಿ ಕಂಡು ಕೇಳರಿಯದಂತೆ ನಡೆದ ಭೀಕರ ರೈಲು ದುರಂತದಲ್ಲಿ 268ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ದುರ್ಘಟನೆ ದೇಶ-ವಿದೇಶಗಳಲ್ಲಿನ ಜನರ ಮನ ಕಲುಕುವಂತೆ ಮಾಡಿದೆ.
ಹಳಿತಪ್ಪಿ ಉರುಳಿ ಬಿದ್ದಿರುವ ರೈಲುಗಳು.
ಹಳಿತಪ್ಪಿ ಉರುಳಿ ಬಿದ್ದಿರುವ ರೈಲುಗಳು.

ನವದೆಹಲಿ: ಒಡಿಶಾ ಬಾಲಸೋರ್'ನಲ್ಲಿ ಕಂಡು ಕೇಳರಿಯದಂತೆ ನಡೆದ ಭೀಕರ ರೈಲು ದುರಂತದಲ್ಲಿ 268ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ದುರ್ಘಟನೆ ದೇಶ-ವಿದೇಶಗಳಲ್ಲಿನ ಜನರ ಮನ ಕಲುಕುವಂತೆ ಮಾಡಿದೆ.

ರೈಲು ದುರಂತ ಘಟನೆಗೆ ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ, ಪಾಕಿಸ್ತಾನ, ಟರ್ಕಿ ಹಾಗೂ ತೈವಾನ್​ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 'ನಾವು ನಿಮ್ಮೊಂದಿಗಿದ್ದೇವೆ' ಎಂದು ಧೈರ್ಯ ತುಂಬಿದ್ದಾರೆ.

ದುರಂತದ ಬಗ್ಗೆ ಟ್ವೀಟ್​ ಮಾಡಿ ಕಳವಳ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ಅವರು, ವಿನಾಶಕಾರಿ ರೈಲು ಅಪಘಾತ ಹಲವು ಪ್ರಾಣಗಳನ್ನು ಬಲಿ ಪಡೆದಿದೆ. ಇದು ದುಃಖಕರ ಸಂಗತಿ. ಘಟನೆಯ ಬಗ್ಗೆ ಸಂತಾಪವಿದೆ ಎಂದು ಹೇಳಿದ್ದಾರೆ. ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು, ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ. ಈ ದುಃಖದ ಸಮಯದಲ್ಲಿ ಶ್ರೀಲಂಕಾ ಭಾರತದೊಂದಿಗೆ ನಿಂತಿರುತ್ತದೆ ಎಂದು ಹೇಳಿದ್ದಾರೆ.

 ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರೂ ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಭಾರತದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ಸಂತ್ರಸ್ತರಾದ ಪ್ರತಿಯೊಬ್ಬರ ಗುಣಮುಖಕ್ಕಾಗಿ ಪ್ರಾರ್ಥಿಸುವೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುವೆ ಎಂದು ಟ್ವೀಟ್​ ಮಾಡಿದ್ದಾರೆ.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ರೈಲು ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತ್ರಿವಳಿ ರೈಲು ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ದುಃಖಕ್ಕೀಡು ಮಾಡಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಅಪಘಾತದ ಚಿತ್ರಗಳು ಮತ್ತು ವರದಿಗಳು ನನ್ನ ಹೃದಯವನ್ನು ಕಲುಕಿದವು. ಈ ಕಷ್ಟದ ಸಮಯದಲ್ಲಿ ಕೆನಡಿಯನ್ನರು ಭಾರತದ ಜನರೊಂದಿಗೆ ನಿಂತಿರುತ್ತಾರೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಒಡಿಶಾ ರೈಲು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ದುಃಖದ ಸಮಯದಲ್ಲಿ ಶ್ರೀಲಂಕಾ ಭಾರತದೊಂದಿಗೆ ನಿಲ್ಲುತ್ತೇವೆಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಹೇಳಿದ್ದಾರೆ.

ಭಾರತದಲ್ಲಿನ ರೈಲು ಅಪಘಾತದಲ್ಲಿ ನೂರಾರು ಜೀವಗಳನ್ನು ಕಳೆದುಕೊಂಡಿರುವ ತೀವ್ರ ನೋವು ತಂದಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com