ಆಸ್ಕರ್ ವಿಜೇತೆ ಮಲೇಷ್ಯಾ ಮೂಲದ ಮಿಚೆಲ್ ಯೋಹ್ ಗೆ ಭಾರತದೊಂದಿಗೆ ಇದೆ ವಿಶೇಷ ನಂಟು!
ಮಲೇಷ್ಯಾ ಸಂಜಾತ, ಆಸ್ಕರ್ ಪ್ರಶಸ್ತಿ ಗೆದ್ದ ಮಿಚೆಲ್ ಯೋಹ್, ಬಹುಮುಖಿ ಕಾರ್ಯಕ್ಷಮತೆ ವಿಭಾಗದಲ್ಲಿ ಅತ್ಯುತ್ತಮ ನಟಿಯರಿಗೆ ನೀಡಲಾಗುವ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
Published: 13th March 2023 04:12 PM | Last Updated: 14th March 2023 04:53 PM | A+A A-

ಆಸ್ಕರ್ ವಿಜೇತೆ ಮಲೇಷ್ಯಾ ಮೂಲದ ಮಿಚೆಲ್ ಯೋಹ್
ಮಲೇಷ್ಯಾ ಸಂಜಾತ, ಆಸ್ಕರ್ ಪ್ರಶಸ್ತಿ ಗೆದ್ದ ಮಿಚೆಲ್ ಯೋಹ್, ಬಹುಮುಖಿ ಕಾರ್ಯಕ್ಷಮತೆ ವಿಭಾಗದಲ್ಲಿ ಅತ್ಯುತ್ತಮ ನಟಿಯರಿಗೆ ನೀಡಲಾಗುವ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಏಷ್ಯನ್ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಆಕೆ 2015 ರ ಏಪ್ರಿಲ್ ತಿಂಗಳಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಸಿಲುಕಿಕೊಂಡಿದ್ದರು.
ಜೇಮ್ಸ್ ಬಾಂಡ್ ಸಿನಿಮಾ 'Tomorrow Never Dies' ಮತ್ತು 'Crouching Tiger, Hidden Dragon' ನಿಂದ ಖ್ಯಾತಿ ಪಡೆದಿರುವ ಮಿಚೆಲ್ ಯೋಹ್, ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು 'ಎವೆರಿಥಿಂಗ್, ಎವೆರಿವೇರ್ ಆಲ್ ಅಟ್ ಒನ್ಸ್' ನಲ್ಲಿನ ಪಾತ್ರದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇಷ್ಟೆಲ್ಲಾ ಖ್ಯಾತಿ ಹೊಂದಿರುವ ಮಿಚೆಲ್ ಯೋಹ್, ಭಾರತದೊಂದಿಗೆ ವಿಶೇಷವಾದ ನಂಟನ್ನು ಹೊಂದಿದ್ದಾರೆ. ಆಕೆಗೆ ಪ್ರೇರಕ ಶಕ್ತಿಯಾಗಿರುವುದು ಬೌದ್ಧ ನಾಯಕ ಗ್ಯಾಲ್ವಾಂಗ್ ದ್ರುಕ್ಪಾ. ಭಾರತದಲ್ಲಿನ ದ್ರುಕ್ಪಾ ಪರಂಪರೆಯ ನಾಯಕರಾಗಿರುವ ಇವರು ಹಿಮಾಲಯದಾದ್ಯಂತ 1,000ಕ್ಕೂ ಹೆಚ್ಚು ಮಠಗಳನ್ನು ಹೊಂದಿದ್ದಾರೆ.
ಬೌದ್ಧ ಬಿಕ್ಕು ಗ್ಯಾಲ್ವಾಂಗ್ ದ್ರುಕ್ಪಾ ಅವರ ಅನುಯಾಯಿಯಾಗಿರುವ ಮಿಚೆಲ್, ಗ್ಯಾಲ್ವಾಂಗ್ ಅವರ ಸಲಹೆಯಂತೆಯೇ ನೇಪಾಳದ ಭೂಕಂಪ ಸಂತ್ರಸ್ತರಿಗಾಗಿ ಹಾಲಿವುಡ್ ನಿಂದ 2015 ರಲ್ಲಿ ದೇಣಿಗೆ ಸಂಗ್ರಹಿಸಿ ಅದನ್ನು ದ್ರುಕ್ಪಾ ಅವರ ಲೀವ್ ಟು ಲವ್ ಫೌಂಡೇಷನ್ ಗೆ ತಲುಪಿಸಿದ್ದರು. ಆಗ ಅವರು ಈ ಫೌಂಡೇಷನ್ ನ ರಾಯಭಾರಿಯೂ ಆಗಿದ್ದರು. ನೇಪಾಳದ ಭೂಕಂಪನದಿಂದ ರಕ್ಷಿಸಲ್ಪಟ್ಟ ಮಿಚೆಲ್ ದಂಪತಿ ಪುನಃ ನೇಪಾಳಕ್ಕೆ ಬಂದು ಅಲ್ಲಿನ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದರು.
ಇದನ್ನೂ ಓದಿ: ಭಾರತದ 'RRR', 'ದಿ ಎಲಿಫೆಂಟ್ ವಿಸ್ಪರರ್ಸ್' ಗೆ ಆಸ್ಕರ್ ಪ್ರಶಸ್ತಿ; ಇಲ್ಲಿದೆ 95ನೇ ಅಕಾಡೆಮಿ ಆವಾರ್ಡ್ಸ್ ಪುರಸ್ಕೃತರ ಪಟ್ಟಿ
ಮಿಚೆಲ್ ಗೆ ಮಾರ್ಗದರ್ಶಕರಾಗಿರುವ ಗ್ಯಾಲ್ವಾಂಗ್ ದ್ರುಕ್ಪಾ, ಲಡಾಖ್ ನಲ್ಲಿರುವ ಪ್ರಶಸ್ತಿ ಪುರಸ್ಕೃತ ಡ್ರುಕ್ ವೈಟ್ ಲೋಟಸ್ ಸ್ಕೂಲ್ ನ ಸ್ಥಾಪಕರೂ ಆಗಿದ್ದಾರೆ. ಈ ಶಾಲೆಯ ಮಾದರಿ ಅಮೀರ್ ಖಾನ್ ಅವರ 3 ಈಡಿಯೆಟ್ಸ್ ಸಿನಿಮಾದಲ್ಲಿ ರಾಂಚೋ ಸ್ಕೂಲ್ ಹೆಸರಿನಲ್ಲಿ ಜನಪ್ರಿಯತೆ ಗಳಿಸಿತ್ತು.
ಮಿಚೆಲ್ UNDP ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ (SDGs) ಸದ್ಭಾವನಾ ರಾಯಭಾರಿಯೂ ಆಗಿದ್ದಾರೆ.
ಇನ್ನು ಭಾರತದ ಸಂತ ನರೋಪಾ ಅವರ 1,000 ನೇ ಜನ್ಮದಿನಾಚರಣೆಯ ಭಾಗವಾಗಿ ನಡೆದ ನರೋಪಾ ಹಬ್ಬದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಮಿಚೆಲ್ ಭಾರತವನ್ನು ನೆನಪಿಸಿಕೊಳ್ಳುವುದು ಹೀಗೆ... "ಇಲ್ಲಿಯದ್ದು ನನಗೆ ಎಂದಿಗೂ ಆಧ್ಯಾತ್ಮಿಕ ಪ್ರಯಾಣವಾಗಿದೆ. ಎತ್ತರದ ಪರ್ವತ ಹಾದಿಗಳು ಯಾವಾಗಲೂ ಬೌದ್ಧ ಕಲೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಭದ್ರಕೋಟೆಯನ್ನು ನನಗೆ ನೆನಪಿಸುತ್ತದೆ ಮತ್ತು ಈ ಶುದ್ಧತೆಯ ಮನೋಭಾವವು ಪ್ರಪಂಚದ ಬೇರೆ ಎಲ್ಲೂ ಕಾಣುವುದಿಲ್ಲ".
ಬೌದ್ಧ ನಾಯಕ ಗ್ಯಾಲ್ವಾಂಗ್ ದ್ರುಕ್ಪಾ 17 ನೇ ಶತಮಾನದ ಹೆಮಿಸ್ ಮಠವನ್ನು ನಡೆಸುತ್ತಿದ್ದು, ಇದು ಲೇಹ್ ನಿಂದ 40 ಕಿ.ಮೀ ದೂರದಲ್ಲಿದೆ. ಬೌದ್ಧಧರ್ಮವನ್ನು ಮಿಚೆಲ್, ತತ್ವಜ್ಞಾನ ಎಂದು ಬಣ್ಣಿಸಿದ್ದಾರೆ.