
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(ಸಂಗ್ರಹ ಚಿತ್ರ)
ಉತ್ತರ ಕೊರಿಯಾ: ಉತ್ತರ ಕೊರಿಯಾದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಬೈಬಲ್ ಜೊತೆ ಕಾಣಿಸಿಕೊಂಡವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತಿದೆ.
ಬೈಬಲ್ ಇಟ್ಟುಕೊಂಡಿರುವುದನ್ನು ಕಂಡರೆ ಅಂತಹ ವ್ಯಕ್ತಿಗಳಿಗೆ ಮರಣದಂಡನೆ ವಿಧಿಸಿ ಮಕ್ಕಳು ಸೇರಿದಂತೆ ಆ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಿರುವ ಘಟನೆಗಳು ಗಮನಕ್ಕೆ ಬಂದಿರುವುದಾಗಿ ಅಮೇರಿಕಾದ ಇಲಾಖೆಯೊಂದು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಅಮೇರಿಕಾದ ಸರ್ಕಾರಿ ಇಲಾಖೆಯೊಂದು 2022 ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ಪ್ರಕಟಿಸಿದ್ದು, ಉತ್ತರ ಕೊರಿಯಾದಲ್ಲಿ ಈ 70,000 ಕ್ರೈಸ್ತರನ್ನು ಜೈಲಿಗೆ ಹಾಕಲಾಗಿದೆ ಇವರೊಂದಿಗೆ ಇತರ ಮತಗಳ ಜನರನ್ನೂ ಬಂಧಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಉತ್ತರ ಕೊರಿಯಾ: ನಾಟಕ ವೀಕ್ಷಿಸಿ ಶೇರ್ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಮರಣ ದಂಡನೆ!
2 ವರ್ಷದ ಮಗುವಿಗೆ, ಆತನ ಪೋಷಕರು ಬೈಬಲ್ ಇಟ್ಟುಕೊಂಡಿದ್ದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ಧಾರ್ಮಿಕ ಆಚರಣೆಗಳು ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಗಿದ್ದು ಎರಡು ವರ್ಷದ ಮಗು ಸೇರಿದಂತೆ ಇಡೀ ಕುಟುಂಬಕ್ಕೆ 2009 ರಲ್ಲಿ ರಾಜಕೀಯ ಜೈಲು ಶಿಬಿರದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ಎಂಬುದನ್ನು ವರದಿ ಹೇಳಿದೆ.
ಈ ಶಿಬಿರಗಳಲ್ಲಿ ಬಂಧಿಯಾಗಿರುವ ಕ್ರಿಶ್ಚಿಯನ್ನರು ಭೀಕರ ಪರಿಸ್ಥಿತಿಗಳು ಮತ್ತು ವಿವಿಧ ರೀತಿಯ ದೈಹಿಕ ಹಿಂಸೆಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಶಾಮನಿಕ್ ಅನುಯಾಯಿಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದಾಖಲಾದ 90% ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ರಾಜ್ಯ ಭದ್ರತಾ ಸಚಿವಾಲಯವು ಕಾರಣವಾಗಿದೆ ಎಂದು ವರದಿ ಆರೋಪಿಸಿದೆ.