ಲಿಬಿಯಾದಲ್ಲಿ ಭೀಕರ ಪ್ರವಾಹ: 5 ಸಾವಿರ ಮಂದಿ ಸಾವು, 10 ಸಾವಿರ ಮಂದಿ ನಾಪತ್ತೆ, ಭಾರತ ಸಂತಾಪ

ಲಿಬಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕನಿಷ್ಟ 5 ಸಾವಿರ ಮಂದಿ ಸಾವಿಗೀಡಾಗಿದ್ದು, 10 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಲಿಬಿಯಾದಲ್ಲಿ ಭೀಕರ ಪ್ರವಾಹ
ಲಿಬಿಯಾದಲ್ಲಿ ಭೀಕರ ಪ್ರವಾಹ

ಟ್ರಿಪೋಲಿ: ಲಿಬಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕನಿಷ್ಟ 5 ಸಾವಿರ ಮಂದಿ ಸಾವಿಗೀಡಾಗಿದ್ದು, 10 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರೀ ಚಂಡಮಾರುತ ಮತ್ತು ಮಳೆಯ ಪರಿಣಾಮ ಲಿಬಿಯಾದಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಲಿಬಿಯಾದ ಡರ್ನಾ ನಗರ ಪ್ರವಾಹದಿಂದ ಮುಳುಗಿ ಹೋಗಿದೆ. ಡೇನಿಯಲ್ ಚಂಡಮಾರುತದಿಂದ ಭಾರಿ ಮಳೆಯಾಗಿದ್ದು, ವ್ಯಾಪಕ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಈ ಭೀಕರ ಪ್ರವಾಹದಲ್ಲಿ  ಕನಿಷ್ಠ 5,300 ಜನರು ಸಾವನ್ನಪ್ಪಿದ್ದು, 10,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಲಿಬಿಯಾದ ರಕ್ಷಣಾ ಪಡೆಗಳು ಕರಾವಳಿ ನಗರದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 1,000 ಕ್ಕೂ ಹೆಚ್ಚು ಶವಗಳನ್ನು ಹೊರಗೆ ತೆಗೆದಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಿನ ಸಂಖ್ಯೆ ಸಾವಿರದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ (ಐಎಫ್‌ಆರ್‌ಸಿ) ಲಿಬಿಯಾ ರಾಯಭಾರಿ ಹೇಳಿದೆ. ಪ್ರವಾಹದ ಸಂತ್ರಸ್ತರಿಗೆ ಸಹಾಯ ಮಾಡುವಾಗ ಮೂವರು ಐಎಫ್‌ಆರ್‌ಸಿ ಸ್ವಯಂಸೇವಕರು ಸಾವನ್ನಪ್ಪಿದ್ದಾರೆ. ಡರ್ನಾದಲ್ಲಿ ಪ್ರವಾಹದಿಂದಾಗಿ 30,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಲಿಬಿಯಾದ ವಿಶ್ವಸಂಸ್ಥೆಯ ವಲಸೆಗಾಗಿ ಅಂತರರಾಷ್ಟ್ರೀಯ ಸಂಸ್ಥೆ (IOM) ಬುಧವಾರ ತಿಳಿಸಿದೆ.

ಡ್ಯಾಂ ಒಡೆದು ಅನಾಹುತ
ಧಾರಾಕಾರ ಮಳೆಯಿಂದಾಗಿ ಲಿಬಿಯಾದ ಎರಡು ಪ್ರಮುಖ ಅಣೆಕಟ್ಟುಗಳು ಒಡೆದು ಹೋಗಿದ್ದು, ಅಣೆಕಟ್ಟು ಒಡೆದ ಪರಿಣಾಮ ಸುಮಾರು 125,000 ನಿವಾಸಿಗಳಿರುವ ನಗರವಾದ ಡರ್ನಾ ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ. ಎಲ್ಲೆಡೆ ಕಟ್ಟಡಗಳು ನೆಲಕ್ಕುರುಳಿವೆ. ವಾಹನಗಳು ನಜ್ಜುಗುಜ್ಜಾಗಿವೆ, ಕಲ್ಲು ಮಣ್ಣು ತುಂಬಿ ಹೋಗಿವೆ, ಸಮುದ್ರದಲ್ಲಿ, ಕಣಿವೆಗಳಲ್ಲಿ, ಕಟ್ಟಡಗಳ ಕೆಳಗೆ ದೇಹಗಳು ಎಲ್ಲೆಡೆ ಬಿದ್ದಿವೆ' ಎಂದು ಪತ್ರಕರ್ತರು ವರದಿ ಮಾಡಿದ್ದಾರೆ.

ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು ಲಿಬಿಯಾಗೆ ಸಹಾಯ ಮಾಡಲು ತುರ್ತು ಪ್ರತಿಕ್ರಿಯೆ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದೆ. ಬದುಕುಳಿದವರ ಹುಡುಕಾಟಕ್ಕಾಗಿ ರಕ್ಷಣಾ ಪಡೆಗಳು, ಅಗ್ನಿಶಾಮಕ ದಳ, ಹಾಗೂ ಇತರ ದೇಶಗಳು ಲಿಬಿಯಾಕ್ಕೆ ನೆರವಿಗೆ ಧಾವಿಸುತ್ತಿದ್ದಂತೆ, ವಿಚಲಿತರಾದ ಡರ್ನಾ ನಾಗರಿಕರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಮನೆಗಳಿಗೆ ಧಾವಿಸುವುದು ಸಾಮಾನ್ಯವಾಗಿದೆ.

ಭಾರತ ಸಂತಾಪ
ಇನ್ನು ಲಿಬಿಯಾ ಪ್ರವಾಹದಲ್ಲಿ ಮೃತಪಟ್ಟವರಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಸಂತಾಪ ಸೂಚಿಸಿದ್ದಾರೆ. "ಲಿಬಿಯಾದಲ್ಲಿ ಭಾರೀ ಪ್ರವಾಹದಿಂದಾಗಿ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ಸಂತ್ರಸ್ತರ ಕುಟುಂಬಗಳೊಂದಿಗೆ ಮತ್ತು ದುರಂತದಿಂದ ಸಂತ್ರಸ್ತರಾದ ಎಲ್ಲರೊಂದಿಗೂ ನಮ್ಮ ಸಹಾನುಭೂತಿ ಇದೆ. ಈ ಕಷ್ಟದ ಸಮಯದಲ್ಲಿ ಲಿಬಿಯಾದ ಜನರೊಂದಿಗೆ ನಾವಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com