ಮದುವೆ ಮನೆಯಲ್ಲಿ ಅಗ್ನಿ ದುರಂತ: ಮದುಮಕ್ಕಳು ಸೇರಿ 100ಕ್ಕೂ ಹೆಚ್ಚು ಮಂದಿ ಭಸ್ಮ; ಸುಟ್ಟು ಕರಕಲಾದ ವೆಡ್ಡಿಂಗ್ ಹಾಲ್
ಮದುವೆ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮಾಹಿತಿ ನೀಡಿದ್ದಾರೆ.
Published: 27th September 2023 11:36 AM | Last Updated: 27th September 2023 03:30 PM | A+A A-

ಮದುವೆ ಮನೆಯಲ್ಲಿ ಅಗ್ನಿ ಅವಘಡ
ನಿನೆವೆಹ್: ಉತ್ತರ ಇರಾಕ್‌ನ ಹಮ್ದನಿಯಾಹ್ ಪಟ್ಟಣದಲ್ಲಿರುವ ಮದುವೆ ಮಂಟಪವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಮದುವೆ ಸಂದರ್ಭದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮಾಹಿತಿ ನೀಡಿದ್ದಾರೆ.
ನಿನೆವೆ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಪ್ರಕಾರ, 'ಹಮ್ದನಿಯಾದ ಮದುವೆ ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಕನಿಷ್ಠ 100 ಜನರು ಪ್ರಾಣ ಕಳೆದುಕೊಂಡಿದ್ದಾರೆ. 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೊಸುಲ್ ನಗರದ ಹಮ್ದನಿಯಾ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಹಾಲ್‌ನಲ್ಲಿ ಮದುವೆ ಪಾರ್ಟಿ ನಡೆಯುತ್ತಿತ್ತು. ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಇದೇ ವೇಳೆ ಒಂದು ಅಗ್ನಿ ಕಡೆ ಅಗ್ನಿಯ ಸ್ಪರ್ಶವಾಗಿದೆ. ಇದಾಗುತ್ತಲೇ ಇಡೀ ಮದುವೆ ಹಾಲ್‌ಗೆ ಬೆಂಕಿ ಆವರಿಸಿದೆ. ಕೂಡಲೇ ಕಿರುಚಾಡುತ್ತ ಜನ ಹೊರಗೆ ಬರಲು ಯತ್ನಿಸಿದರಾದರೂ ಬಹುತೇಕ ಮಂದಿ ಅಗ್ನಿ ಕೆನ್ನಾಲಗೆಗೆ ಸಿಲುಕಿದರು. ಇಡೀ ಕಲ್ಯಾಣ ಮಂಟಪ ಸುಟ್ಟು ಕರಕಲಾಗಿದ್ದು, ಬಹುತೇಕ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮುಂಬೈ: ಓಶಿವಾರದ ಶಾಪಿಂಗ್ ಮಾಲ್‌ನಲ್ಲಿ ಭಾರಿ ಅಗ್ನಿ ಅವಘಡ, 14 ಮಂದಿ ರಕ್ಷಣೆ
ಅಗ್ನಿ ಅವಘಡ ಸಂಭವಿಸುತ್ತಲೇ ಹಲವು ಅಗ್ನಿ ಶಾಮಕ ವಾಹನಗಳು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅಷ್ಟೊತ್ತಿಗಾಗಲೇ ಇಡೀ ಕಲ್ಯಾಣ ಮಂಟಪಕ್ಕೆ ಬೆಂಕಿ ಆವರಿಸಿತ್ತು. ಇಷ್ಟಾದರೂ ಸಿಬ್ಬಂದಿಯು 550 ಜನರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿರುವುದರಿಂದ ಹಾಗೂ ಇನ್ನೂ ಹಲವು ಜನ ಕಲ್ಯಾಣ ಮಂಟಪದಲ್ಲಿ ಸಿಲುಕಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡದಲ್ಲಿ ನೂರಾರು ಜನ ಮೃತಪಟ್ಟಿರುವುದಕ್ಕೆ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುದಾನಿ ಸಂತಾಪ ಸೂಚಿಸಿದ್ದು, ಘಟನೆಯನ್ನು ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ, ಗಾಯಾಳುಗಳಿಗೆ ಚಿಕಿತ್ಸೆ, ಜನರ ರಕ್ಷಣೆಗೆ ಸಕಲ ರೀತಿಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ: 5 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ, 63 ಮಂದಿ ದುರ್ಮರಣ
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾಗರಿಕ ರಕ್ಷಣಾ ಅಧಿಕಾರಿಗಳು ಬೆಂಕಿಯು ಸಂಭವಿಸಿದ ಈವೆಂಟ್ ಹಾಲ್‌ನೊಳಗೆ ಪರಿಶೀಲನೆ ನಡೆಸುತ್ತಿದ್ದಾರೆ. ಈವೆಂಟ್ ಹಾಲ್ ಸಿಬ್ಬಂದಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬುದನ್ನು ತನಿಖೆ ಮೂಲಕ ತಿಳಿದುಕೊಳ್ಳಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯೊಂದರ ಪ್ರಕಾರ, ಮದುವೆಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಿಡಿಗಳು ಚಾವಣಿಯ ಮೂಲಕ ಸಭಾಂಗಣದಲ್ಲಿ ಸಿಡಿದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.