'ಅವರಿಗೆ ಕಥೆ ಗೊತ್ತಿದೆ, ಎಚ್ಚರಿಕೆಯಿಂದ ವರ್ತಿಸಲಿ': Iran ಗೆ Trump ಎಚ್ಚರಿಕೆ; ಗಡುವು ನೀಡದೆ ಸೇನಾ ಕಾರ್ಯಾಚರಣೆಗೆ ಅಮೆರಿಕಾ ಮುಂದು..!

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಯಾವುದೇ ಗಡುವು ನಿಗದಿಪಡಿಸಲು ತಮಗೆ ಇಷ್ಟವಿಲ್ಲ ಎಂದು ಹೇಳಿದ ಟ್ರಂಪ್, "ಅವರಿಗೆ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಅವರು ಎಚ್ಚರಿಕೆಯಿಂದ ವರ್ತಿಸುವುದು ಒಳಿತು," ಎಂದು ಎಚ್ಚರಿಕೆ ನೀಡಿದ್ದಾರೆ.
Trump
ಡೊನಾಲ್ಟ್ ಟ್ರಂಪ್
Updated on

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ಯಾವುದೇ ಗಡುವು ನಿಗದಿಪಡಿಸಲು ತಮಗೆ ಇಷ್ಟವಿಲ್ಲ ಎಂದು ಹೇಳಿದ ಟ್ರಂಪ್, "ಅವರಿಗೆ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಅವರು ಎಚ್ಚರಿಕೆಯಿಂದ ವರ್ತಿಸುವುದು ಒಳಿತು," ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕ ಸೇನೆ ಹಾರ್ಮುಜ್ ಜಲಸಂಧಿ ಸಮೀಪ ಹಾಗೂ ಇರಾನ್ ಕರಾವಳಿ ಭಾಗದಲ್ಲಿರುವ ಹಲವು ಸೇನಾ ನೆಲೆಗಳ ಮೇಲೆ ಸುಮಾರು ಏಳು ಗಂಟೆಗಳ ಕಾಲ ನಿರಂತರ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಪೆನ್ಸಿಲ್ವೇನಿಯಾದಲ್ಲಿ ನಡೆದ ಪೆನ್ಸಿಲ್ವೇನಿಯಾ ಡಿಫೆನ್ಸ್ ಅಂಡ್ ಇನೋವೇಷನ್ ಸಮ್ಮಿಟ್ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ಗೆ ಯಾವುದೇ ಅಂತಿಮ ಗಡುವು ನೀಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

"ನನಗೆ ಗಡುವು ನೀಡುವುದು ಇಷ್ಟವಿಲ್ಲ. ಆದರೆ, ಅವರಿಗೆ ಎಲ್ಲವೂ ಗೊತ್ತಿದೆ. ಪರಿಸ್ಥಿತಿ ಏನೆಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಅವರು ಎಚ್ಚರಿಕೆಯಿಂದ ವರ್ತಿಸಬೇಕು," ಎಂದು ಹೇಳಿದರು.

ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮಾತುಕತೆಗೆ ಮುಂದಾಗದಿದ್ದರೆ ಮುಂದಿನ ವಾರದಿಂದ ಅದರ ವಿದ್ಯುತ್ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ಅಮೆರಿಕ ಭಾರೀ ದಾಳಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

"ನಾಳೆ ರಾತ್ರಿ ನಾವು ಭಾರೀ ದಾಳಿ ನಡೆಸುತ್ತೇವೆ. ಅದರ ಮರುದಿನವೂ ದಾಳಿ ಮುಂದುವರಿಯುತ್ತದೆ. ಮುಂದಿನ ವಾರ ಪರಿಸ್ಥಿತಿ ಇರಾನ್‌ಗೆ ಇನ್ನಷ್ಟು ಕಠಿಣವಾಗಲಿದೆ. ಅವರ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುತ್ತೇವೆ. ಪ್ರಮುಖ ಸೇತುವೆಗಳನ್ನೂ ಧ್ವಂಸಗೊಳಿಸುತ್ತೇವೆ. ಅವರು ಮಾತುಕತೆ ಮೇಜಿನತ್ತ ಬರದಿದ್ದರೆ ಇದನ್ನು ತಡೆಯಲು ಸಾಧ್ಯವಿಲ್ಲ," ಎಂದು ಹೇಳಿದ್ದರು.

Trump
'ನಾವು ತಪ್ಪು ಮಾಡಿದೆವು...': Epstein Files ಬಿಡುಗಡೆ ಎಡವಟ್ಟು ಒಪ್ಪಿಕೊಂಡ ಅಮೆರಿಕ ಉಪಾಧ್ಯಕ್ಷ JD Vance; Trump ಆಡಳಿತಕ್ಕೆ ತೀವ್ರ ಮುಜುಗರ..!

ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ನಿಲ್ಲಿಸಲು ಮಾಡಲಾಗಿದ್ದ ತಿಳಿವಳಿಕೆ ಒಪ್ಪಂದ (Memorandum of Understanding) ವಿಫಲವಾದ ಬಳಿಕ ಅಮೆರಿಕ ತನ್ನ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಎರಡೂ ದೇಶಗಳ ಅಧಿಕಾರಿಗಳ ನಡುವೆ ಸಂಪರ್ಕ ಮುಂದುವರಿದಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ವಿಧಿಸಿರುವ ನಿರ್ಬಂಧವನ್ನು ಹಿಂತೆಗೆದುಕೊಳ್ಳುವವರೆಗೆ ಯಾವುದೇ ಅಧಿಕೃತ ಮಾತುಕತೆ ನಡೆಯುವುದಿಲ್ಲ ಎಂಬುದು ಅಮೆರಿಕದ ನಿಲುವಾಗಿದೆ.

ಸೇನಾ ಕಾರ್ಯಾಚರಣೆ ಎಷ್ಟು ದಿನ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ನಾನು ನಿರ್ಧರಿಸುವವರೆಗೂ ದಾಳಿಗಳು ಮುಂದುವರಿಯುತ್ತವೆ," ಎಂದು ಸ್ಪಷ್ಟಪಡಿಸಿದರು.

ಅಮೆರಿಕ ನೆಲದ ಸೇನೆಯನ್ನು ಇರಾನ್‌ಗೆ ಕಳುಹಿಸುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಲಿಲ್ಲ. ಆದರೆ, ಅದು ಮೊದಲ ಆಯ್ಕೆಯಾಗಿರುವುದಿಲ್ಲ ಎಂದು ಹೇಳಿದರು.

"ಕೆಲವು ಸಂದರ್ಭಗಳಲ್ಲಿ ನೆಲದ ಮೇಲಿನ ಸೇನಾ ಕಾರ್ಯಾಚರಣೆಯ ಅಗತ್ಯ ಉಂಟಾಗಬಹುದು. ಆದರೆ, ನಮ್ಮ ಪರವಾಗಿ ಅಂತಹ ಕಾರ್ಯಾಚರಣೆ ನಡೆಸಲು ಇತರರೂ ಇದ್ದಾರೆ," ಎಂದು ಹೇಳಿದರು.

ಇದರ ಜೊತೆಗೆ, ವಾಷಿಂಗ್ಟನ್ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಇರಾನ್ ಮೇಲೆ ಮತ್ತಷ್ಟು ಒತ್ತಡ ಹೇರುತ್ತಾ, "ನೀವು ಒಪ್ಪಂದ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ಬಳಿ ಏನೂ ಉಳಿಯುವುದಿಲ್ಲ," ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ, ಅಮೆರಿಕ ನಡೆಸುತ್ತಿರುವ ಸೇನಾ ದಾಳಿಗಳಲ್ಲಿ ನಾಗರಿಕರ ಪ್ರಾಣಹಾನಿ ಆಗದಂತೆ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಇರಾನ್ ವಿರುದ್ಧ ಟ್ರಂಪ್ ನೀಡಿರುವ ಈ ಹೊಸ ಎಚ್ಚರಿಕೆ ಪಶ್ಚಿಮ ಏಷ್ಯಾದಲ್ಲಿ ಈಗಾಗಲೇ ಉದ್ವಿಗ್ನವಾಗಿರುವ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ. ಎರಡೂ ರಾಷ್ಟ್ರಗಳು ಪರಸ್ಪರ ದಾಳಿ ಮತ್ತು ಪ್ರತಿದಾಳಿಗಳನ್ನು ಮುಂದುವರಿಸುತ್ತಿರುವುದರಿಂದ, ಈ ಸಂಘರ್ಷ ಯಾವ ಹಂತಕ್ಕೆ ತಲುಪಲಿದೆ ಎಂಬ ಆತಂಕ ಅಂತರರಾಷ್ಟ್ರೀಯ ಸಮುದಾಯದಲ್ಲಿ ಹೆಚ್ಚುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com