ಮಗನ ಮದುವೆಗಿಂತ ದೇಶವೇ ಮುಖ್ಯ: 'ಇರಾನ್ ಬಿಕ್ಕಟ್ಟು' ಹಿನ್ನೆಲೆಯಲ್ಲಿ ಟ್ರಂಪ್ ಮಹತ್ವದ ನಿರ್ಧಾರ; ಟೆಹ್ರಾನ್ ಮೇಲೆ ಭಾರೀ ದಾಳಿಗೆ ಅಮೆರಿಕಾ ಸಜ್ಜು..!

ಇರಾನ್ ಮೇಲಿನ ಮುಂದಿನ ದಾಳಿಗೆ ಅಮೆರಿಕಾ ಒಳಗೊಳಗೇ ಭಾರೀ ರಣತಂತ್ರ ರೂಪಿಸುತ್ತಿದ್ದು, ಅಂತಿಮ ನಿರ್ಧಾರ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಅಮೆರಿಕದ ಪ್ರಮುಖ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳು ತಮ್ಮ ರಜೆಗಳನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ತಿಳಿದುಬಂದಿದೆ.
Donald Trump, Mojtaba Khamenei
ಡೊನಾಲ್ಡ್ ಟ್ರಂಪ್,ಮೊಜ್ತಾಬಾ ಖಮೇನಿ
Updated on

ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮವು ಮುರಿದುಬೀಳುವ ಹಂತಕ್ಕೆ ತಲುಪಿದ್ದು, ಉಭಯ ದೇಶಗಳ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ.

ಇರಾನ್ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ಭೀಕರ ದಾಳಿಗೆ ಸಜ್ಜಾಗುತ್ತಿರುವ ಮುನ್ಸೂಚನೆಗಳ ನಡುವೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಹಿರಿಯ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಅಮೆರಿಕಾ ಆಡಳಿತದ ಈ ನಡೆ ಜಾಗತಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಪಾಮ್ ಬೀಚ್‌ನ ಪ್ರಮುಖ ಸಾಮಾಜಿಕ ಕಾರ್ಯಕರ್ತೆ ಬೆಟಿನಾ ಆಂಡರ್ಸನ್ ಅವರೊಂದಿಗೆ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹ ನಿಶ್ಚಯವಾಗಿತ್ತು. ಆದರೆ, ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟ್ರಂಪ್ ಮದುವೆಗೆ ಗೈರಾಗಲಿದ್ದಾರೆ ಎಂಬುದನ್ನು ಶ್ವೇತಭವನ ಖಚಿತಪಡಿಸಿದೆ.

ಈ ಕುರಿತು ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ಬರೆದುಕೊಂಡಿರುವ ಟ್ರಂಪ್, "ಸರ್ಕಾರಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳಿಂದಾಗಿ ನಾನು ಹೋಗುತ್ತಿಲ್ಲ" ಎಂದು ತಿಳಿಸಿದ್ದಾರೆ. ಅಲ್ಲದೆ, "ಇರಾನ್ ವಿಚಾರ ಹಾಗೂ ಇನ್ನಿತರ ಗಂಭೀರ ವಿದ್ಯಮಾನಗಳು ಎದುರಿಗಿರುವಾಗ ಮದುವೆಗೆ ಹೋಗಲು ಇದು ಸೂಕ್ತ ಸಮಯವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಮೆಮೋರಿಯಲ್ ಡೇ (Memorial Day) ವೀಕೆಂಡ್ ಹಿನ್ನೆಲೆಯಲ್ಲಿ ನ್ಯೂಜೆರ್ಸಿಯ ತಮ್ಮ ಗಾಲ್ಫ್ ಕ್ಲಬ್‌ನಲ್ಲಿ ಶುಕ್ರವಾರ ಸಂಜೆ ಸಮಯ ಕಳೆಯಬೇಕಿದ್ದ ಟ್ರಂಪ್, ನ್ಯೂಯಾರ್ಕ್‌ನಲ್ಲಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ತುರ್ತಾಗಿ ವಾಷಿಂಗ್ಟನ್‌ಗೆ ಹಿಂತಿರುಗಿದ್ದಾರೆಂದು ತಿಳಿದುಬಂದಿದೆ. ಈ ಬೆಳವಣಿಗೆ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದ್ದು, ಯುದ್ಧ ಕುರಿತ ಆತಂಕವನ್ನು ಹಚ್ಚಿಸಿದೆ.

ಯುದ್ಧಕ್ಕೆ ಅಮೆರಿಕಾ ಸೇನೆ ಸಿದ್ಧತೆ

ಅಮೆರಿಕ ಸೇನಾ ಮೂಲಗಳ ಪ್ರಕಾರ, ಇರಾನ್ ಮೇಲಿನ ಮುಂದಿನ ದಾಳಿಗೆ ಟ್ರಂಪ್ ಆಡಳಿತವು ಒಳಗೊಳಗೇ ಬೃಹತ್ ರಣತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದ್ದು, ಅಂತಿಮ ನಿರ್ಧಾರ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಅಮೆರಿಕದ ಪ್ರಮುಖ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳು ತಮ್ಮ ರಜೆಗಳನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸೇನೆಗೆ ಕಟ್ಟುನಿಟ್ಟಿನ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಲಾಗುತ್ತಿದೆ.

2026ರ ಆರಂಭದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಸುಮಾರು ಆರು ವಾರಗಳ ಕಾಲ ಭೀಕರ ಸಂಘರ್ಷ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಖಾರಿ (Gulf) ಪ್ರದೇಶದಲ್ಲಿದ್ದ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿ, ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಇಂಧನ ಸಾಗಣೆಗೆ ನಿರ್ಬಂಧ ಹೇರಿತ್ತು.

ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು. ತದನಂತರ ಏಪ್ರಿಲ್ ಮೊದಲ ವಾರದಲ್ಲಿ ಟ್ರಂಪ್ ಕದನ ವಿರಾಮ ಘೋಷಿಸಿದ್ದರಿಂದ ಏಪ್ರಿಲ್ 7-8 ರ ಸುಮಾರಿಗೆ ತಾತ್ಕಾಲಿಕ ಶಾಂತಿ ನೆಲೆಸಿತ್ತು.

Donald Trump, Mojtaba Khamenei
Watch | ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ!

ಮುರಿದುಬಿದ್ದ ಶಾಂತಿ ಮಾತುಕತೆ

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ಪರೋಕ್ಷ ಶಾಂತಿ ಮಾತುಕತೆಗಳು ನಡೆದಿದ್ದರೂ, ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ. ಅಮೆರಿಕವು ನೇರ ಮಾತುಕತೆಗೆ ಒತ್ತಾಯಿಸುತ್ತಿದ್ದರೆ, ಇರಾನ್ ಮಾತ್ರ ಮಧ್ಯಸ್ಥಗಾರರ ಮೂಲಕವೇ ಸಂವಾದ ನಡೆಸಲು ಪಟ್ಟು ಹಿಡಿದಿದೆ. ಹೀಗಾಗಿ ಮುಖಾಮುಖಿ ಚರ್ಚೆ ಸಾಧ್ಯವಾಗದೆ ಕದನ ವಿರಾಮವು ಸಂಪೂರ್ಣವಾಗಿ ದುರ್ಬಲಗೊಂಡಿದೆ.

ಜಗತ್ತಿನ ಶೇಕಡಾ 20 ರಷ್ಟು ಕಚ್ಚಾ ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯೇ ಸದ್ಯದ ವಿವಾದದ ಕೇಂದ್ರಬಿಂದುವಾಗಿದೆ. ಇಲ್ಲಿ ಉಂಟಾಗುವ ಸಣ್ಣ ವ್ಯತ್ಯಯವೂ ಜಾಗತಿಕ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಲಿದೆ.

ಸದ್ಯಕ್ಕೆ ಅಮೆರಿಕದ ನೌಕಾಪಡೆ ಈ ಭಾಗದಲ್ಲಿ ಬೀಡುಬಿಟ್ಟಿದೆ. ಇತ್ತೀಚೆಗೆ ಪಾಕಿಸ್ತಾನದ ಮೂಲಕ ಇರಾನ್ ಸಲ್ಲಿಸಿರುವ 14 ಅಂಶಗಳ ಶಾಂತಿ ಪ್ರಸ್ತಾವನೆಯಲ್ಲಿ ಅಮೆರಿಕದ ನಿರ್ಬಂಧಗಳ ತೆರವು ಹಾಗೂ ತನ್ನ ಪ್ರದೇಶದ ಮೇಲಿನ ಹತೋಟಿಗೆ ಇರಾನ್ ಒತ್ತಾಯಿಸಿದೆ.

ಅಮೆರಿಕ ಬೆಂಬಲಿತ 'ಪ್ರಾಜೆಕ್ಟ್ ಫ್ರೀಡಂ' ನೌಕೆಗಳ ಸಂಚಾರಕ್ಕೆ ನಿರ್ಬಂಧ ಹೇರುವುದಾಗಿಯೂ ಇರಾನ್ ಎಚ್ಚರಿಸಿದೆ. ಮಾತುಕತೆಗಳು ಹಳ್ಳ ಹಿಡಿದಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಪ್ರಾರಂಭವಾಗುವ ಭೀತಿ ಎದುರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com