Published: 08 Sep 2018 03:17 PM IST | Updated: 08 Sep 2018 03:25 PM IST
ಸಾಂದರ್ಭಿಕ ಚಿತ್ರಕಠ್ಮಂಡು : ಏಳು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ವೊಂದು ಇಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಅಪಫಾತಕ್ಕೀಡಾಗಿರುವ ಘಟನೆ ನಡೆದಿದೆ.ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ದಾಡಿಂಗ್ ಮತ್ತು ನುವಾಕೊಟ್ ಜಿಲ್ಲೆಯ ಗಡಿಯಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜಪಾನಿನ ಚಾರಣಿಗರು ಸೇರಿದಂತೆ ಆರು ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನುವಾಕೊಟ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಅದರ ಅವಶೇಷಗಳನ್ನು ಸ್ಥಳೀಯರು ಗುರುತಿಸಿದ್ದಾರೆ ಎಂದು ಅಲ್ಟಿಟ್ಯೂಡ್ ಏರ್ ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ನಿಮಾ ನೂರ್ ಶೆರ್ಪಾ ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.ಆದಾಗ್ಯೂ, ಪ್ರಯಾಣಿಕರ ಪರಿಸ್ಥಿತಿ ಈವರೆಗೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಗ್ಗೆ ಟೇಕಾಪ್ ಆದ ಹೆಲಿಕಾಪ್ಟರ್ 20 ಮೈಲಿ ಕ್ರಮಿಸಿದ ನಂತರ ಬೆಳಗ್ಗೆ 8-10 ರ ಸುಮಾರಿನಿಂದಲೂ ರೇಡಾರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.ಸುದ್ದಿ ತಿಳಿದ ತಕ್ಷಣ ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಹೆಲಿಕಾಪ್ಟರ್ ಗೆ ಬೆಂಕಿ ಹತ್ತಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ನೇಪಾಳ ಸೇನಾ ಹೆಲಿಕಾಪ್ಟರ್ ಮತ್ತು ಖಾಸಗಿ ಹೆಲಿಕಾಪ್ಟರ್ ನೊಂದಿಗೆ ರಕ್ಷಣಾ ಸಿಬ್ಬಂದಿಗಳನ್ನು ಅಪಘಾತಕ್ಕೀಡಾದ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.