ರಾಜ್ಯ

ಕೊರೋನಾ ಲಾಕ್ಡೌನ್ ಸಂಕಷ್ಟ: ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಕಟ್ಟಡದ 15ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ

Manjula VN

ಬೆಂಗಳೂರು: ಒಂದೆಡೆ ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡ ಸಂಕಷ್ಟ, ಮತ್ತೊಂದೆಡೆ ಕೌಟುಂಬಿಕ ಕಲಹ ಎರಡರಿಂದಲೂ ತೀವ್ರವಾಗಿ ನೊಂದ ವ್ಯಕ್ತಿಯೊಬ್ಬರು ಅಪಾರ್ಟ್'ಮೆಂಟ್ ವೊಂದರ 15ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ವಿವೇಕನಗರ ಠಾಣಾ ವ್ಯಾಪ್ತಿಯ ಜಿ ಕಾರ್ಪೋ ರೆಸಿಡೆನ್ಸ್ ನಲ್ಲಿ ಮಂಗಳವಾರ ನಡೆದಿದೆ. 

ಕೋರಮಂಗಲದ ನಿವಾಸಿ ವಿವೇದ್ ಮಧುಸೂದನ್ ವೈದ್ಯ (61) ಮೃತ ದುರ್ದೈವಿಯಾಗಿದ್ದಾರೆ. ಫ್ಲ್ಯಾಟ್ ಖರೀದಿ ನೆಪದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ನಿನ್ನೆ ಬೆಳಿಗ್ಗೆ 11.30ರ ಸುಮಾರಿಗೆ ಬಂದಿರುವ ಮಧುಸೂದನ್ ಅವರು, ಸೂಪರ್ ವೈಸರ್'ಗೆ ಫ್ಲ್ಯಾಟ್ ತೋರಿಸುವಂತೆ ತಿಳಿಸಿದ್ದಾರೆ. 

ಈ ವೇಳೆ ಸೂಪರ್ ವೈಸರ್ ಕಮಲೇಶ್ 15ನೇ ಮಹಡಿಯಲ್ಲಿರುವ ಫ್ಲ್ಯಾಟ್ ತೋರಿಸಿದ್ದಾರೆ. ಬಳಿಕ ಫ್ಲ್ಯಾಟ್'ನ ಫೋಟೋ ತೆಗೆಯಬೇಕು ಸ್ಥಳದಿಂದ ತೆರಳುವಂತೆ ಕಮಲೇಶ್ ಅವರಿಗೆ ತಿಳಿಸಿದ್ದಾರೆ. ಕಮಲೇಶ್ ಅವರು ಹೋಗುತ್ತಿದ್ದಂತೆಯೇ ಮಧುಸೂದನ್ ಅವರು ಇದ್ದಕ್ಕಿದ್ದಂತೆ ಕಟ್ಟಣಡದಿಂದ ಕೆಳಗೆ ಜಿಗಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕಮಲೇಶ್ ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿಗಳನ್ನು ಕರೆದಿದ್ದಾರೆ. ಬಳಿಕ ವಿವೇಕ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

10 ವರ್ಷಗಳ ಹಿಂದೆ ಪತ್ನಿ ಪತಿಗೆ ವಿಚ್ಛೇದನ ನೀಡಿದ್ದು, ವಿಚ್ಛೇದಿತ ಪತ್ನಿ ಹಾಗೂ ಇಬ್ಬರು ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ. ಪತ್ನಿ ವಿಚ್ಛೇದನ ನೀಡಿದಾಗಿನಿಂದಲೂ ಮಧುಸೂದನ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

SCROLL FOR NEXT