ದೇಶ

ಕರ್ನಾಟಕ ನಂತರ ಗೋವಾದಲ್ಲಿ ಹೈಡ್ರಾಮಾ: ಬಿಜೆಪಿ ಜತೆ 10 ಕಾಂಗ್ರೆಸ್ ಶಾಸಕರು ವಿಲೀನ

Lingaraj Badiger
ಪಣಜಿ: ರಾಜ್ಯದಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆಯುತ್ತಿರುವ ಬೆನ್ನಲ್ಲೇ ನೆರೆಯ ಗೋವಾದಲ್ಲೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಗೋವಾ ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್ ಶಾಸಕರು ಬುಧವಾರ ಆಡಳಿತರೂಢ ಬಿಜೆಪಿ ಜೊತೆ ವಿಲೀನವಾಗಿದ್ದಾರೆ.
ಒಟ್ಟು 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರ ಬಣ ಇಂದು ಬಿಜೆಪಿಯೊಂದಿಗೆ ವಿಲೀನವಾಗಿದೆ. ಇದರೊಂದಿಗೆ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ 5ಕ್ಕೆ ಕುಸಿದಿದ್ದು, ಆಡಳಿತರೂಢ ಬಿಜೆಪಿ ಬಲ 17ರಿಂದ 27ಕ್ಕೆ ಏರಿಕೆಯಾಗಿದೆ.
ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್​ ಶಾಸಕರು ಇಂದು ಸಂಜೆ ಸ್ಪೀಕರ್ ರಾಜೇಶ್ ಪಟ್ನಾಕರ್  ಅವರನ್ನು ಭೇಟಿ ಮಾಡಿ, ವಿಲೀನ ಪತ್ರ ನೀಡಿದ್ದಾರೆ. 
ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್​ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ.
ಮೂರನೇ ಎರಡು ಭಾಗದಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಿರುವುದರಿಂದ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಮತ್ತು ಶಾಸಕ ಸ್ಥಾನವೂ ರದ್ದಾಗುವುದಿಲ್ಲ.
SCROLL FOR NEXT