Deepika-Ranveer ಮೊದಲ ಮಗುವಿನ ನಿರೀಕ್ಷೆಯಲ್ಲಿ ತಾರಾ ದಂಪತಿ

Sumana Upadhyaya

ಬಾಲಿವುಡ್ ನ ಖ್ಯಾತ ಕ್ಯೂಟ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಳಿನಲ್ಲಿ ಮಗುವಿನ ಆಗಮನವಾಗಲಿದೆ. ಇಂದು ಇನ್ಸ್ಟಾಗ್ರಾಂ ಮೂಲಕ ತಾರಾ ದಂಪತಿ ಸಿಹಿಸುದ್ದಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಜನಪ್ರಿಯ ಜೋಡಿ, ಮಗುವಿನ ಬಟ್ಟೆ, ಮಗುವಿನ ಬೂಟುಗಳು ಮತ್ತು ಬಲೂನ್‌ಗಳ ಮುದ್ದಾದ ಚಿತ್ರಗಳನ್ನು ತೋರಿಸಿ ಸೆಪ್ಟೆಂಬರ್ 2024 ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ದೀಪಿಕಾ ಲಂಡನ್ ನಲ್ಲಿ ನಡೆದ 77 ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTA) ನಲ್ಲಿ ಬಿಳಿಯ ಹೊಳೆಯುವ ಸೀರೆಯನ್ನು ಧರಿಸಿದ್ದಾಗ ಅವರು ಗರ್ಭಿಣಿ ಎಂಬ ವದಂತಿ ಹಬ್ಬಿತ್ತು. ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಕೌಚರ್ ಸೀರೆ ಮತ್ತು ಕಸ್ಟಮ್ ಆಭರಣದಲ್ಲಿ ಕಂಗೊಳಿಸಿದ್ದರು.

ನಂತರ ಇನ್ಸ್ಟಾಗ್ರಾಂನಲ್ಲಿ ದೀಪಿಕಾ ಬೆಡ್ ಮೇಲೆ ಕುಳಿತು ಆಹಾರ ಸೇವಿಸುವ ಫೋಟೋ ಹಾಕಿದಾಗಲೂ ಬಸುರಿ ಬಯಕೆಯೇ ಎಂದು ಅಭಿಮಾನಿಗಳು ಕಾಲೆಳೆದಿದ್ದರು.

ಕಾರ್ಯಕ್ರಮ ಮುಗಿಸಿ ಮುಂಬೈ ಏರ್ ಪೋರ್ಟ್ ನಲ್ಲಿ ಬಂದಿಳಿದಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಾಗಲೂ ಅವರ ಅಭಿಮಾನಿಗಳು ದೀಪಿಕಾ ಪ್ರೆಗ್ನೆಂಟ್ ಬೇಬಿ ಬಂಪ್ ಕಾಣುತ್ತಿದೆ ಎಂದೆಲ್ಲ ಊಹಿಸುತ್ತಿದ್ದರು. ಅದೀಗ ನಿಜವಾಗಿದೆ.

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ 'ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ' ಸೆಟ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಭೇಟಿಯಾದರು. ನವೆಂಬರ್ 2018 ರಲ್ಲಿ ಮದುವೆಯಾದರು.

ಈ ಹಿಂದೆ ಪೋಷಕರಾಗುವ ಬಗ್ಗೆ ಕೇಳಿದಾಗ, ದೀಪಿಕಾ "ಖಂಡಿತವಾಗಿ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಮ್ಮದೇ ಆದ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ಎದುರು ನೋಡುತ್ತಿದ್ದೇವೆ'' ಎಂದಿದ್ದರು.

ದೀಪಿಕಾ ಸೆಲೆಬ್ರಿಟಿಯಾಗಿದ್ದರೂ ಮನೆಯಲ್ಲಿ ಸಾಮಾನ್ಯರ ರೀತಿಯಲ್ಲಿಯೇ ಇರುತ್ತಾರಂತೆ. ನನ್ನ ಚಿಕ್ಕಮ್ಮ, ಚಿಕ್ಕಪ್ಪ, ಕುಟುಂಬ ಸ್ನೇಹಿತರು - ಅವರು ಯಾವಾಗಲೂ ನಾನು ಹೇಗೆ ಬದಲಾಗಿಲ್ಲ ಎಂದು ಹೇಳುತ್ತಿರುತ್ತಾರೆ. ನಮ್ಮ ಪೋಷಕರು ನನ್ನನ್ನು ಆ ರೀತಿ ಬೆಳೆಸಿದ್ದಾರೆ ಎಂದು ಹೇಳಿದ್ದರು.

ಚಿತ್ರೋದ್ಯಮದಲ್ಲಿ ಖ್ಯಾತಿ ಮತ್ತು ಹಣ ಗಳಿಕೆಯಲ್ಲಿ ಮುಳುಗಿಹೋಗುವುದು ಸಾಮಾನ್ಯ. ಆದರೆ ಮನೆಯಲ್ಲಿ ಯಾರೂ ನನ್ನನ್ನು ಸೆಲೆಬ್ರಿಟಿ ಎಂದು ಪರಿಗಣಿಸುವುದಿಲ್ಲ, ನಾನು ಮೊದಲು ಮಗಳು ಮತ್ತು ಸಹೋದರಿ, ನಾನು ಸಾಮಾನ್ಯಳಾಗಿಯೇ ಇರಲು ಬಯಸುತ್ತೇನೆ ಎನ್ನುತ್ತಾರೆ.

ನನ್ನನ್ನು ಸೆಲೆಬ್ರಿಟಿ ಎಂದು ಕಾಣದೆ ಸಹಜವಾಗಿರಲು ನನ್ನ ಕುಟುಂಬದವರು ಸಹಾಯ ಮಾಡುತ್ತಾರೆ. ರಣವೀರ್ ಮತ್ತು ನಾನು ನಮ್ಮ ಮಕ್ಕಳಲ್ಲಿಯೂ ಅದೇ ಮೌಲ್ಯಗಳನ್ನು ಬೆಳೆಸಲು ನೋಡುತ್ತೇವೆ ಎಂದಿದ್ದರು ದೀಪಿಕಾ.

ನಟನೆ ವಿಚಾರಕ್ಕೆ ಬಂದರೆ ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ಜವಾನ್' ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು. ನಂತರ ಹೃತಿಕ್ ರೋಷನ್ ಜೊತೆಗಿನ ಫೈಟರ್ ಸಿನಿಮಾ ಕೂಡ ಹೆಸರು ತಂದುಕೊಟ್ಟಿದೆ.

ಇದೀಗ ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಮ್ ಎಗೇನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಅವರು ಅವರು ರಣವೀರ್ ಸಿಂಗ್, ಅಜಯ್ ದೇವಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಕರೀನಾ ಕಪೂರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಟಿ ದೀಪಿಕಾ ಪಡುಕೋಣೆ ಗರ್ಭಿಣಿ?: ಪುಷ್ಟಿ ಕೊಟ್ಟ BAFTA 2024 Photos!