'ಅಲ್ಲಿ ಜನ ಗುರುತು ಹಿಡಿಯಲೇ ಇಲ್ಲ, ಅದೊಂದು ವಿಶಿಷ್ಟ ಅನುಭವ' ಎಂದ ವಿರಾಟ್ ಕೊಹ್ಲಿ

Sumana Upadhyaya

ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ, ಮಗಳು ವಮಿಕಾ ಮತ್ತು ಕಳೆದ ತಿಂಗಳಷ್ಟೇ ಜನಿಸಿದ ಪುತ್ರ ಅಕಾಯ್ ಜೊತೆ ಇಂಗ್ಲೆಂಡಿನಲ್ಲಿ ಎರಡು ತಿಂಗಳು ಕಳೆದು ಐಪಿಎಲ್ ಪಂದ್ಯಕ್ಕೆ ಭಾರತಕ್ಕೆ ವಾಪಸ್ಸಾಗಿದ್ದಾರೆ.

ವಿರುಷ್ಕಾ ಅಭಿಮಾನಿಗಳಿಗೆ ಭಾರತದಲ್ಲಿ ದಂಪತಿಯ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ವಿರಾಟ್ ತಮ್ಮ ಕುಟುಂಬ ಜೊತೆ ಭಾರತ ತೊರೆದು ಇಂಗ್ಲೆಂಡಿನಲ್ಲಿಯೇ ಶಾಶ್ವತವಾಗಿ ನೆಲೆಸುತ್ತಾರೆಯೇ ಎಂಬ ಅನುಮಾನ ಕಾಡಿತ್ತು.

ಇಂಗ್ಲೆಂಡ್‌ ವಿರುದ್ಧದ ತವರು ಟೆಸ್ಟ್‌ ಸರಣಿ ಆಡದೆ ಎರಡು ತಿಂಗಳು ವಿರಾಮ ಪಡೆದಿದ್ದರ ಬಗ್ಗೆ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಎರಡು ತಿಂಗಳ ವಿರಾಮದ ಸಮಯವನ್ನು ಕುಟುಂಬದ ಜೊತೆ ಆನಂದದಿಂದ ಕಳೆದಿದ್ದೇನೆ ಎಂದಿದ್ದಾರೆ ವಿರಾಟ್.

ಈ ಎರಡು ತಿಂಗಳನ್ನು ಒಂದು 'ನವ್ಯ ಅನುಭವ' ಎಂದು ಕರೆದ ವಿರಾಟ್, ''ನಾವು ಭಾರತದಲ್ಲಿ ಇರಲಿಲ್ಲ. ಜನರು ನಮ್ಮನ್ನು ಗುರುತಿಸದ ಸ್ಥಳದಲ್ಲಿ ನಾವಿದ್ದೆವು. ಕುಟುಂಬದ ಜೊತೆ ಸಮಯ ಕಳೆದು ಎಲ್ಲರಂತೆ ಸಾಮಾನ್ಯ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

ಹರ್ಷ ಭೋಗ್ಲೆ ಅವರೊಂದಿಗೆ ಸಂದರ್ಶನದಲ್ಲಿ ವಿರಾಟ್, ''ಎರಡು ಮಕ್ಕಳನ್ನು ಹೊಂದಿರುವಾಗ, ಕುಟುಂಬದ ದೃಷ್ಟಿಕೋನದಿಂದ ವಿಷಯಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಸಿಕ್ಕ ಅವಕಾಶಕ್ಕಾಗಿ ನಾನು ದೇವರಿಗೆ ಅತ್ಯಂತ ಕೃತಜ್ಞ'' ಎಂದು ಹೇಳಿದ್ದಾರೆ.

ದೇಶಕ್ಕೆ ಮರಳಿದ ನಂತರ 'ಖಂಡಿತಾ ನಮ್ಮ ಧ್ವನಿ ಜೋರಾಗಿದೆ' ಎಂದು ಹೇಳಿದ RCB ಮಾಜಿ ನಾಯಕ ವಿರಾಟ್, ಜನರು ಗುರುತು ಹಿಡಿಯದಿದ್ದ ಜಾಗದಲ್ಲಿ ಸುತ್ತಾಡುವುದು ಒಂದು ವಿಶಿಷ್ಟ ಅನುಭವ ಎಂದಿದ್ದಾರೆ.

''ಅದೊಂದು ಸುಂದರ ಅನುಭವ. ರಸ್ತೆಯಲ್ಲಿ ಸಾಮಾನ್ಯರಂತೆ ಓಡಾಡುವುದು ಜನ ಗುರುತು ಹಿಡಿಯದೇ ಇದ್ದದ್ದು ಅದ್ಭುತ ಅನುಭವ,'' ಎಂದಿದ್ದಾರೆ. ಫೆಬ್ರವರಿ 20 ರಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗು ಅಕಾಯ್ ಆಗಮನವನ್ನು ಘೋಷಿಸಿಕೊಂಡಿದ್ದರು.

ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು.

ಪಂಜಾಬ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಜೊತೆಗೆ ಆರೆಂಜ್‌ ಕ್ಯಾಪ್‌ ಪಡೆದುಕೊಂಡಿದ್ದರು. "ನಾವು ವಿರಾಮ ಪಡೆದಿದ್ದು ಕೇವಲ ತಿಂಗಳು ಮಾತ್ರ. ಹಾಗಾಗಿ ಇದರ ಬಗ್ಗೆ ಜಾಸ್ತಿ ಉತ್ಸುಕವಾಗುವುದು ಬೇಡ. ಆರೆಂಜ್ ಕ್ಯಾಪ್‌ ಎಷ್ಟು ಮೌಲ್ಯ ಎಂಬುದು ನನಗೆ ಅರ್ಥವಾಗಿದೆ," ಎಂದು ಹೇಳಿದ್ದಾರೆ.

ಅನುಷ್ಕಾ ಶರ್ಮಾ ತನ್ನ ತಾಯ್ತನವನ್ನು ಆನಂದಿಸುತ್ತಿದ್ದಾರೆ.ನಟಿ ಸಾಮಾಜಿಕ ಜಾಲತಾಣಗಳಿಂದಲೂ ದೂರ ಉಳಿದಿದ್ದಾರೆ. ವರದಿ ಪ್ರಕಾರ, ಅನುಷ್ಕಾ ಶರ್ಮಾ ಮಗ ಅಕಾಯ್ ಮತ್ತು ಮಗಳು ವಮಿಕಾ ಜೊತೆ ಜೂನ್ ತಿಂಗಳಿನಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿರುಷ್ಕಾ ಮಗಳು ವಮಿಕಾಗೆ ಈಗ 3 ವರ್ಷ, ಜೂನ್ ತಿಂಗಳ ನಂತರ ಎಲ್ಲ ಶಾಲೆಗಳಲ್ಲಿ ಪ್ರವೇಶಾತಿ ನಡೆಯಲಿದೆ. ಹಾಗಾಗಿ ಇದೇ ಜೂನ್ ತಿಂಗಳಲ್ಲೇ ಭಾರತಕ್ಕೆ ಅನುಷ್ಕಾ ಮಕ್ಕಳನ್ನು ಕರೆದುಕೊಂಡು ವಾಪಸ್ಸಾಗುತ್ತಾರೆ ಎಂದು ಹೇಳಲಾಗುತ್ತಿದೆ.