ರಾಜ್‌ಕೋಟ್ ಗೇಮ್ ಝೋನ್ ಬೆಂಕಿಗೆ 28 ಮಂದಿ ಬಲಿ; ಮಾನವ ನಿರ್ಮಿತ ದುರಂತ ಎಂದ ಗುಜರಾತ್ ಹೈಕೋರ್ಟ್
Prasad SN
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಶನಿವಾರ ಸಂಜೆ ವಾರಾಂತ್ಯದ ವಿಹಾರಕ್ಕೆ ಬಂದಿದ್ದ ಜನರಿಂದ ತುಂಬಿ ತುಳುಕುತ್ತಿದ್ದ ಗೇಮ್ ಝೋನ್ ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ.
ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತರ ಗುರುತು ಪತ್ತೆಗಾಗಿ ಮೃತದೇಹ ಮತ್ತು ಸಂತ್ರಸ್ತರ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಅಗತ್ಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ನಾಲ್ಕು ವರ್ಷಗಳಿಂದ ವಸತಿ ಪ್ರದೇಶದಲ್ಲಿ ಟಿಆರ್‌ಪಿ ಗೇಮ್ ಝೋನ್ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಭಾನುವಾರ ಬೆಳಗ್ಗೆ ನಾನಾ-ಮಾವಾ ರಸ್ತೆಯಲ್ಲಿ ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿದರು.
ಸಿಎಂ ಭೂಪೇಂದ್ರ ಪಟೇಲ್ ಅವರು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಗುಜರಾತ್ ಹೈಕೋರ್ಟ್‌ನ ವಿಶೇಷ ಪೀಠವು ಭಾನುವಾರ ಅಗ್ನಿ ಅವಘಡ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿದೆ. ಇದು ಪ್ರಾಥಮಿಕವಾಗಿ "ಮಾನವ ನಿರ್ಮಿತ ದುರಂತ" ಎಂದು ಹೇಳಿದೆ.