ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ಕಾಲಿವುಡ್ ಪವರ್ ಹೌಸ್, ಅಭಿಮಾನಿಗಳ ಪಾಲಿನ ಪ್ರೀತಿಯ ತಲೈವಾ ಇಂದು ಡಿಸೆಂಬರ್ 12 ಕ್ಕೆ ತಮ್ಮ 75 ವರ್ಷಗಳನ್ನು ಪೂರೈಸಿದ್ದಾರೆ. ಅವರ ಬದುಕಲ್ಲಿ ಇಂದು ವಿಶೇಷ ದಿನ.
ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ತಮಿಳು ನಾಡಿಗೆ ಹೋಗಿ ಕಾಲಿವುಡ್ ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಮಾತ್ರವೇಕೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದ ರಜನಿಕಾಂತ್ ಅವರ ಸಿನಿಪಯಣ ಒಂದು ಮಹತ್ವದ ಮೈಲಿಗಲ್ಲು.
75 ವರ್ಷ ವಯಸ್ಸಿನ ರಜನಿಕಾಂತ್ ಒಬ್ಬ ಅದ್ವಿತೀಯ ಸಾಂಸ್ಕೃತಿಕ ವಿದ್ಯಮಾನವಾಗಿ ಎದ್ದು ಕಾಣುತ್ತಾರೆ. ತಮಿಳು ಚಲನಚಿತ್ರಗಳಲ್ಲಿ ಅವರು ತಮ್ಮ ಅತಿದೊಡ್ಡ ಯಶಸ್ಸನ್ನು ಗಳಿಸಿದ್ದರೂ, ಅವರ ಖ್ಯಾತಿಯು ಇಡೀ ಭಾರತವನ್ನೇ ವ್ಯಾಪಿಸಿದೆ.
ರಜನಿಕಾಂತ್ ಅವರು 1983 ರಲ್ಲಿ ತೆರೆಕಂಡ 'ಅಂಧಾ ಕಾನೂನ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈಗಾಗಲೇ ಪ್ರಮುಖ ತಾರೆಯರಾಗಿದ್ದರು. ಅವರಿಗೆ ಆಗ 32 ವರ್ಷ ವಯಸ್ಸು.
ಶಿವಾಜಿ ರಾವ್ ಗಾಯಕ್ವಾಡ್ ಎಂಬ ಮರಾಠಿ ಮಾತನಾಡುವ ಕುಟುಂಬದಲ್ಲಿ ಜನಿಸಿ, ಬಸ್ ಕಂಡಕ್ಟರ್‌ನಿಂದ ಚಲನಚಿತ್ರ ಸ್ಟಾರ್ ಆಗುವವರೆಗೆ ಯಶಸ್ಸಿನ ಏಣಿಯನ್ನು ಹತ್ತಿದ್ದರು. ರಜನಿಕಾಂತ್ ಅದೇ ಮಾದರಿಯನ್ನು ಹಿಂದಿ ಚಿತ್ರಗಳಿಗೂ ಅನ್ವಯಿಸಿದರು.
ರಜನಿಕಾಂತ್ ಮತ್ತು ಕಮಲ್ ಹಾಸನ್ ದಕ್ಷಿಣ ಭಾರತ ಚಿತ್ರರಂಗದ ಜೀವಂತ ದಂತಕಥೆಯಾಗಿದ್ದಾರೆ. 1980 ರ ದಶಕದ ಹಿಂದಿ ಚಲನಚಿತ್ರೋದ್ಯಮದ ಅನೇಕರು, ಈ ಇಬ್ಬರು ತಾರೆಯರು ಅಂತಿಮವಾಗಿ ಬಾಲಿವುಡ್ ನಾಯಕರ ಪ್ರಾಬಲ್ಯವನ್ನು ಮುರಿದು ದಕ್ಷಿಣ ಭಾರತದ ನಟರಿಗೆ ಒಂದು ಸ್ಥಾನವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು.
ರಜನಿಕಾಂತ್ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಮೈಲಿಗಲ್ಲು ಸೃಷ್ಟಿಸಿದೆ. ಸಿನಿಮಾ ಜಗತ್ತಿನಲ್ಲಿ 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.
ಪ್ರಧಾನಿ ಮಾತ್ರವಲ್ಲದೆ ತಮಿಳು ನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಶುಭ ಹಾರೈಸಿದ್ದಾರೆ.
ದಕ್ಷಿಣ ಭಾರತದ ನಟ ಧನುಷ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಜನಿಕಾಂತ್ ಅವರಿಗೆ ಶುಭ ಹಾರೈಸಿದ್ದಾರೆ.
ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಬೂ ಜೊತೆ ರಜನಿಕಾಂತ್
ರಜನಿಕಾಂತ್ ಅವರು ಈಗಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅವರು ಹುರುಪಿನಿಂದ ಅಭಿನಯಿಸುತ್ತಾ ಚಿತ್ರಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಈ 75ರ ವಯಸ್ಸಿನಲ್ಲಿಯೂ ಅವರು ಫಿಟ್ ಅಂಡ್ ಫೈನ್ ಆಗಿ ಹೇಗಿದ್ದಾರೆ ಎಂದು ಫ್ಯಾನ್ಸ್ ಆಗಾಗ ಕೇಳುತ್ತಿರುತ್ತಾರೆ
ಅದಕ್ಕೆ ಒಂದು ಸಂದರ್ಶನದಲ್ಲಿ ರಜನಿಕಾಂತ್ ಕೊಟ್ಟ ಉತ್ತರ: ನಾನು 5 ಬಿಳಿವಸ್ತುಗಳ ಸೇವನೆ ಕಡಿಮೆ ಮಾಡುತ್ತೇನೆ ಎಂದು. ಅವುಗಳು: ಉಪ್ಪು, ಸಕ್ಕರೆ, ಮೈದಾ, ಹಾಲು ಮತ್ತು ಮೊಸರು.
ಆರೋಗ್ಯ ದೃಷ್ಟಿಯಿಂದ 2014ರಿಂದ ರಜನಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರಂತೆ. ಒಂದು ಕಾಲದಲ್ಲಿ ಧೂಮಪಾನ ಮತ್ತು ಮದ್ಯಪಾನದ ಚಟ ವಿಪರೀತವಾಗಿತ್ತಂತೆ. ನನ್ನ ಪತ್ನಿ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸಿದಳು ಎಂದು ಒಂದು ಕಡೆ ಹೇಳಿದ್ದರು ರಜನಿ.
ಮಾಂಸ, ಮದ್ಯ, ಧೂಮಪಾನ ಸೇವನೆ ಸಂಪೂರ್ಣ ತ್ಯಜಿಸಿದ್ದಾರಂತೆ ತಲೈವಾ
ಉತ್ತಮ ಆಹಾರ ಸೇವನೆ, ಯೋಗ, ಧ್ಯಾನ, ವ್ಯಾಯಾಮ ಮತ್ತು ಆರೋಗ್ಯಕರ ನಿದ್ರೆಯ ವೇಳಾಪಟ್ಟಿಯ ಸಹಾಯದಿಂದ ಈ ವಯಸ್ಸಿನಲ್ಲೂ ತಮ್ಮನ್ನು ತಾವು ಸದೃಢವಾಗಿ, ಶಕ್ತಿಯುತವಾಗಿ ಮತ್ತು ಸಕ್ರಿಯವಾಗಿ ಇಟ್ಟುಕೊಳ್ಳುತ್ತಾರೆ.