Year 2025: ಬಿಡುಗಡೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳು

Srinivasa Murthy VN

ಕರಾವಳಿ ಧಾರ್ಮಿಕ ಆಚರಣೆಗಳನ್ನು ಕೇಂದ್ರೀಕರಿಸಿದ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಕಾಂತಾರ ಅಧ್ಯಾಯ 1 ಅನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧವಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಚಿತ್ರ 2025 ಅಕ್ಟೋಬರ್ 2ರಂದು ಪ್ಯಾನ್-ಇಂಡಿಯಾ ಬಿಡುಗಡೆಗೆ ಸಿದ್ಧವಾಗಿದೆ.

ಗೀತು ಮೋಹನ್ ದಾಸ್ ನಿರ್ದೇಶನದ ಮತ್ತು ವೆಂಕಟೇಶ್ ನಾರಾಯಣ್ ನಿರ್ಮಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಗೋವಾದ ಡ್ರಗ್ ಮಾಫಿಯಾದ ಸುತ್ತ ಸುತ್ತುವ ಹೈ-ಬಜೆಟ್ ಥ್ರಿಲ್ಲರ್ ಆಗಿದೆ. ಚಿತ್ರದಲ್ಲಿ ಲೇಡಿ ಸೂಪರ್ ಸ್ಚಾರ್ ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಸೇರಿದಂತೆ ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ. ಈ ಚಿತ್ರವು 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕಾಟೇರಾದ ಯಶಸ್ಸಿನ ನಂತರ, ದರ್ಶನ್ ಡೆವಿಲ್ ದಿ ಹೀರೋದಲ್ಲಿ ನಟಿಸಿದ್ದಾರೆ. ದರ್ಶನ್ ಅವರ ವೈಯಕ್ತಿಕ ವಿವಾದಗಳಿಂದಾಗಿ ಈ ಡೆವಿಲ್ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಯಿತು. ಆದಾಗ್ಯೂ ಡೆವಿಲ್ ಚಿತ್ರೀಕರಣ ಶೀಘ್ರದಲ್ಲೇ ಪುನರಾರಂಭವಾಗುವ ನಿರೀಕ್ಷೆಯಿದ್ದು, ಚಿತ್ರವು 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮ್ಯಾಕ್ಸ್ ಚಿತ್ರದ ಯಶಸ್ಸಿನಲ್ಲಿರುವ ನಟ ಕಿಚ್ಚಾ ಸುದೀಪ್ ರ ಮತ್ತೊಂದು ಬಿಗ್ ಬಜೆಟ್ ಚಿತ್ರ 2025ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಅನುಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಪೂರ್ವ-ನಿರ್ಮಾಣ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಇದಲ್ಲದೆ ನಟ ಸುದೀಪ್ ಇನ್ನೂ ಬಹಿರಂಗಗೊಳ್ಳದ ಮತ್ತೊಂದು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ.

2024ರಲ್ಲಿ ಕೃಷ್ಣಂ ಪ್ರಣಯ ಸಖಿ ಹಿಟ್ ಆದ ಬಳಿಕ ನಟ ಗೋಲ್ಡನ್ ಸ್ಟಾರ್ ಗಣೇಶ್, 2025ರಲ್ಲಿ ಯುವರ್ಸ್ ಸಿನ್ಸಿಯರ್ಲಿ ರಾಮ್‌ ಚಿತ್ರದೊಂದಿಗೆ ಮತ್ತೆ ಬೆಳ್ಳಿ ಪರದೆ ಮೇಲೆ ಮರಳುತ್ತಿದ್ದಾರೆ. ಈ ವಿಶೇಷ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ಎ.ಆರ್. ವಿಖ್ಯಾತ್ ನಿರ್ದೇಶಿಸಿದ ಈ ಚಿತ್ರವು ಆಗಸ್ಟ್ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ನಟಿಸಿರುವ ಪ್ಯಾನ್-ಇಂಡಿಯಾ ಚಿತ್ರ ಕೆಡಿ ಕೂಡ 2025ರಲ್ಲಿ ಬಿಡುಗಡೆಯಾಗುತ್ತಿದ್ದು, ಯುಗಾದಿ ಹಬ್ಬದ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರಿಷ್ಮಾ ನಾಣಯ್ಯ, ನಟ ರವಿಚಂದ್ರನ್ ಮತ್ತು ರಮೇಶ್ ಸೇರಿದಂತೆ ಹಲವು ಪ್ರಮುಖ ಸ್ಟಾರ್ ನಟರು ಅಭಿನಯಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮತ್ತು ನಟ ಶಿವರಾಜ್ ಕುಮಾರ್ ಅಭಿನಯದ 45 ಚಿತ್ರವು 2025ರ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಶಿವರಾಜ್‌ಕುಮಾರ್ ಅಲ್ಲದೆ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರವು 2025ರ ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

2024ರಲ್ಲಿ ಭೀಮಾ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದ ದುನಿಯಾ ವಿಜಯ್, 2025ರಲ್ಲಿ 'ಇದು ಸತ್ತವರ ಕಥೆಯಲ್ಲ, ಬದುಕುಳಿದವರ ಕಥೆ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಜಾತಿ ಸಮಸ್ಯೆಗಳನ್ನು ಚರ್ಚಿಸುವ ಚಿತ್ರ ರಾಚಯ್ಯದಲ್ಲಿ ನಟಿಸಿದ್ದಾರೆ. ಜಡೇಶ್ ಹಂಪಿ ನಿರ್ದೇಶಿಸಿದ ಈ ಚಿತ್ರವು ಆಗಸ್ಟ್ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಡಾಲಿ ಧನಂಜಯ್ ನಟಿಸಿದ ಮತ್ತು ಶಶಾಂಕ್ ಸೊಗಲ್ ನಿರ್ದೇಶಿಸಿದ ಕೊಲೆ ತನಿಖಾ ಥ್ರಿಲ್ಲರ್, ಜಿಂಗೊ ಕೂಡ 2025ರ ಅಂತ್ಯದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಧನಂಜಯ್ ರಾಜಕಾರಣಿಯಾಗಿ ನಟಿಸಿದ್ದು, ಇದು ಮಾತ್ರವಲ್ಲದೇ ಧನಂಜಯ್ ಅವರ ಹಲವು ಇತರೆ ಚಿತ್ರಗಳ ಕೆಲಸ ಕೂಡ ಭರದಿಂದ ಸಾಗಿವೆ. ಈ ಪೈಕಿ ಮೆಕ್ಸಿಕೋದ ಅಣ್ಣಾ, ಉತ್ತರಕಾಂಡ ಮತ್ತು ಹಲಗಲಿ ಕೂಡ ಸೇರಿವೆ.

UI ಯಶಸ್ಸಿನ ನಂತರ, ಉಪೇಂದ್ರ ಅವರ ಬಹು ನಿರೀಕ್ಷಿತ ಬುದ್ಧಿವಂತ 2 ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದು 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಜೊತೆ ಜೊತೆಯಲ್ಲಿ ಮತ್ತು ಸಾರಥಿ ಚಿತ್ರಗಳ ನಿರ್ದೇಶಕ ದಿನಕರ್ ತೂಗುದೀಪ ಅವರು ಸ್ವಲ್ಪ ಸಮಯದ ನಂತರ ನಿರ್ದೇಶನಕ್ಕೆ ಮರಳಿದ್ದು, ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿರುವ 'ರಾಯಲ್' ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರ ಇದೇ ಜನವರಿ 24, 2025 ರಂದು ಬಿಡುಗಡೆಯಾಗಲಿದೆ.

ಬಘೀರಾ ಚಿತ್ರದ ಯಶಸ್ಸಿನ ನಂತರ ಶ್ರೀಮುರಳಿ, ಹಲವಾರು ತೆಲುಗು ಹಿಟ್‌ಗಳನ್ನು ನಿರ್ಮಿಸಿದ್ದಕ್ಕಾಗಿ ಹೆಸರುವಾಸಿಯಾದ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಸೇರಿ ಒಂದು ದೊಡ್ಡ ಚಿತ್ರಕ್ಕೆ ಕೈಹಾಕಿದ್ದು, ಹಾಲೇಶ್ ಕೊಗುಂಡಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಪರಾಕ್' ಚಿತ್ರದಲ್ಲಿ ತಲ್ಲೀನರಾಗಿದ್ದು, ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ರಕ್ಷಿತ್ ಶೆಟ್ಟಿ ತಮ್ಮ ನಿರ್ದೇಶನದ ಯೋಜನೆಯಾದ ರಿಚರ್ಡ್ ಆ್ಯಂಟನಿಗಾಗಿ ಸಮಯ ತೆಗೆದುಕೊಳ್ಳುತ್ತಿದ್ದು, ಇದು 2025 ರಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ.

ಯುವರಾಜ್ ಕುಮಾರ್ ಅವರ 'ಎಕ್ಕಾ', ವಿನಯ್ ರಾಜ್‌ಕುಮಾರ್ ಅವರ 'ಗ್ರಾಮಾಯಣ' ಮತ್ತು ಧೀರೇನ್ ರಾಜ್‌ಕುಮಾರ್ ಅವರ ಹೆಸರಿಡದ ಚಿತ್ರಗಳೂ ಕೂಡ 2025ರಲ್ಲಿ ಬೆಳ್ಳಿ ಪರದೆಗೆ ಅಪ್ಪಳಿಸಲು ಸಿದ್ಧವಾಗುತ್ತಿವೆ.

2024 ರಲ್ಲಿ ಗಮನ ಸೆಳೆದ ಅದ್ಧೂರಿ ವಿವಾಹಗಳು!