

ಈ ಹುಡುಗರು ಕೈಯಲ್ಲಿ ಕೊಳಲು ಹಿಡಿದರೆ ಸಾಕು, ನಾದಲೋಕವೇ ಅನಾವರಣಗೊಳ್ಳುತ್ತದೆ. ಇವರ ಮುರಳೀಗಾನಕ್ಕೆ ಮನಸೋತವರು ಅದೆಷ್ಟೋ ಮಂದಿ. ಇಷ್ಟು ಸಣ್ಣ ವಯಸ್ಸಿನವರಿಂದ ಇಂಥ ನಾದಸುಧೆ ಹೊರಹೊಮ್ಮುತ್ತಿದೆ ಎಂದು ನಂಬುವುದೇ ಕಷ್ಟ.
ಮಡಿಕೇರಿಯ ಹೇರಂಭ, ಹೇಮಂತ ಅವಳಿ ಸಹೋದರರು ಮಾಡಿರುವ ಮೋಡಿಯೇ ಅಂಥದ್ದು. ವೇಣುವಾದನದಲ್ಲಿ ಬಾಲ್ಯದಲ್ಲಿಯೇ ಆಸಕ್ತಿ ಬೆಳೆಸಿಕೊಂಡ ಅವಳಿ ಬಾಲಕರು ರಾಜ್ಯ, ರಾಷ್ಟ್ರಮಟ್ಟದಲ್ಲಿ ವೇಣುವಾದನ ಕಾರ್ಯಕ್ರಮ ನೀಡಿ ಖ್ಯಾತರಾಗಿದ್ದಾರೆ.
ಅಮೆರಿಕದ ವಿದ್ವಾನ್ ನೈವೇಲಿ ಸಂತಾನ ಗೋಪಾಲನ್ ಅವರ ಸೌತ್ ಇಂಡಿಯನ್ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚಿನ ಸಂಗೀತಗಾರರೊಂದಿಗೆ ಸಂಗೀತ ಸಂಯೋಜನೆಗೆ ಸಂಗೀತ ಸಂಯೋಜನೆಯ ಸ್ವರೀಕರಣಕ್ಕೆ ಬರಹ ರೂಪು ನೀಡಿ ಆ ಖ್ಯಾತ ಕಲಾವಿದರಿಂದ ಹೇರಂಭ- ಹೇಮಂತ ಜೋಡಿ ಪ್ರಶಂಸೆ ಪಡೆದಿದ್ದಾರೆ. ರಾಷ್ಟ್ರದ ಪ್ರತಿಷ್ಠಿತ ಸಿಸಿಆರ್ಟಿ ಶಿಷ್ಯವೇತನವನ್ನು ಹೇಮಂತ್ ಪಡೆದಿದ್ದರೆ, ಹೇರಂಭ ರಾಜಸ್ಥಾನದ ಉದಯಪುರದಲ್ಲಿ ನಡೆದ ರಾಷ್ಟ್ರಮಟ್ಟದ ಶಾಸ್ತ್ರೀಯ ವೇಣುವಾದನದ 15 ರಿಂದ 35 ವಯೋವಾನದವರಿಗಾಗಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೇ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ಸ್ಪರ್ಧೆಯಲ್ಲಿಯೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಕಠಿಣ ಎಂದೇ ಪರಿಗಣಿತವಾದ ಭರತನಾಟ್ಯ ವಿದ್ವತ್ ಪರೀಕ್ಷೆಗೂ ಈ ಸಹೋದರರು ಹಾಡಿದ್ದಾರೆ.
ಹೇರಂಭನಿಗೆ ಬಾಲ ಪ್ರತಿಭೆ ಪ್ರಶಸ್ತಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಗಾಗಿ ಲಭಿಸಿದ್ದರೆ, ಹೇಮಂತ್ಗೆ ಕಿಶೋರ ಪ್ರತಿಭೆ, ಜ್ಞಾನಶ್ರೀ, ಅರಳುಮಲ್ಲಿಗೆ ಪ್ರಶಸ್ತಿಗಳು ಲಭಿಸಿವೆ. ಅಂತೆಯೇ ಬೆಂಗಳೂರಿನ ಜಕ್ಕೂರುವಿನಲ್ಲಿ ಜರುಗಿದ ವಿಶ್ವದ ಪ್ರತಿಷ್ಠಿತ, ಅತಿ ದೊಡ್ಡದಾದ ದಕ್ಷಿಣ ಭಾರತದ ಸಿಂಫೋನಿಯಲ್ಲಿ ಜಗತ್ತಿನ 150 ದೇಶಗಳಿಂದ ಬಂದಿದ್ದ ಲಕ್ಷಾಂತರ ಪ್ರೇಕ್ಷಕರೆದುರು ವೇಣುವಾದನದಲ್ಲಿ ಪಾಲ್ಗೊಂಡ ಹಿರಿಮೆಯೂ ಈ ಸಹೋದರರದ್ದಾಗಿದೆ.
ಮಡಿಕೇರಿಯ ಅಲಕಾನಂದ- ಸತ್ಯಪ್ರಸಾದ್ ದಂಪತಿ ಪುತ್ರವಾಗಿರುವ ಅಂಬಳೆ ಮನೆತನದ ಹೇರಂಭ- ಹೇಮಂತ ಮೈಸೂರಿನ ಖ್ಯಾತ ವಿದ್ವಾನ್ ಎ.ವಿ. ಪ್ರಕಾಶ್ ಅವರ ಬಳಿ ವೇಣುವಾದನ, ನಾಟ್ಯಶ್ರೀ ಅಂಬಳೆ ರಾಜೇಶ್ವರಿಯವರ ಬಳಿ ಭರತನಾಟ್ಯ, ಭಾರತಿ ಶಾಮಣ್ಣ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯನ್ನು ಕಲಿತಿದ್ದಾರೆ. ಅಂತೆಯೇ, ಮೈಸೂರಿನ ಪಂಡಿತ್ ರವಿಶಂಕರ್ ಶರ್ಮಾ, ವಿದುಷಿ ಡಾ. ಸುಕನ್ಯಾ ಪ್ರಭಾಕರ್, ವಿದುಷಿ ಲಕ್ಷ್ಮಿ ಅವರೂ ಈ ಸಹೋದರರಿಗೆ ಸಂಗೀತ ಕ್ಷೇತ್ರದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಚೆನ್ನೈನಲ್ಲಿರುವ ಹೆಸರಾಂತ ವಿದ್ವಾನ್ ನೈವೇಲಿ ಸಂತಾನ ಗೋಪಾಲನ್ ಅವರು ಈ ಜೋಡಿಯ ಸದ್ಯದ ಗುರುಗಳಾಗಿದ್ದಾರೆ. ಸಂಗೀತ ರಂಗದಲ್ಲಿ ಪ್ರತಿಭೆ ತೋರಿರುವ ಈ ಅವಳಿ ಸಹೋದರರು ಕಲಿಕೆಯಲ್ಲೂ ಮುಂದಿದ್ದು ಎಸ್ಎಸ್ಎಲ್ಸಿಯಲ್ಲಿ ಕ್ರಮವಾಗಿ ಶೇ. 96 ಮತ್ತು ಶೇ.97ರಷ್ಟು ಅಂಕಗಳಿಸಿದ್ದಾರೆ.
ಸಿಂಗಾಪುರ, ಮಲೆಷಿಯಾಗಳಲ್ಲಿಯೂ ಹೇಮಂತ, ಹೇರಂಭ ಕಾರ್ಯಕ್ರಮ ನೀಡಿದ್ದೂ ಅವಳಿ ಸಹೋದರರಿಗೆ ರಾಜ್ಯದ ವಿವಿಧೆಡೆಗಳಿಂದ ವೇಣುವಾದನ ಕಾರ್ಯಕ್ರಮಕ್ಕಾಗಿ ಆಹ್ವಾನ ಸದಾ ಬರುತ್ತಲೇ ಇದೆ.
ಕೊಡಗು ಜಿಲ್ಲೆಯ ವಿವಿಧೆಡೆ ಸೇರಿದಂತೆ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಅಂಬಳೆ ಮನೆತನದ ಈ ಅವಳಿ ಸಹೋದರರು ವೇಣು ವಾದನ ನೀಡಿ ಎಲ್ಲರ ಮನೆಸೂರೆಗೊಂಡಿದ್ದಾರೆ. ಈ ಅವಳಿಗಳು ವೇಣುವಾದನ ನೀಡಿ ಸಿದ್ಧಗೊಳಿಸಿರುವ 'ಎಂದರೋ ಮಹಾನುಭಾವಲು ಅಂದರಕಿ ವಂದನಮು' ಎಂಬ ಹೆಸರಿನ ಸಿಡಿ ಇನ್ನೇನು ಸಂಗೀತ ಪ್ರೇಮಿಗಳಿಗೆ ಲಭಿಸಲು ತಯಾರಾಗುತ್ತಿದೆ. ಈ ಸಿಡಿಯನ್ನು ಧ್ವನಿಮುದ್ರಿಸಿರುವ ಬೆಂಗಳೂರಿನ ಅರವಿಂದ್ ಸ್ಟುಡಿಯೋ ಮಾಲೀಕ ಅರವಿಂದ್ ಕಿಗ್ಗಾಲು ಕೊಡಗಿನ ಈ ಅಪೂರ್ವ ಸಹೋದರರ ಪ್ರತಿಭೆಗೆ ಕೊಡುಗೆ ರೂಪದಲ್ಲಿ ಸಿಡಿಯನ್ನು ಉಚಿತವಾಗಿ ಧ್ವನಿಮುದ್ರಿಸಿದ್ದಾರೆ.
ನಾಟ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ ಸಂಗೀತ ರತ್ನ ಅಂಬಳೆ ಸುಬ್ಬರಾಯರ ಮೊಮ್ಮಕ್ಕಳು ತಾವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಂಬಳೆ ಹೇರಂಭ, ಹೇಮಂತ್ (ಮೊ. 9448044544) ವೇಣುವಾದನವನ್ನೇ ಉಸಿರಾಗಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಸಹೋದರರು ಕೊಳಲು ಹಿಡಿದು ಕೈ ಬೆರಳು ಮೀಟಿದರೆ ಸಾಕು ನಾದಲೋಕವೇ ಸೃಷ್ಟಿಯಾಗುತ್ತದೆ. 17 ವರ್ಷದಲ್ಲಿಯೇ ಈ ಸಹೋದರರು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಬೆರಗು ಮೂಡಿಸುವಂತದ್ದು.
- ಅನಿಲ್ ಎಚ್.ಟಿ.