ಎಡಗೈ ಚಳಕ

Updated on: 

ಕಲೆ ಯಾವುದೇ ಆಗಿರಬಹುದು, ಸತತ ಪ್ರಯತ್ನವಿಲ್ಲದೆ ಅದು ಮನುಷ್ಯನಿಗೆ ಒಲಿಯಲು ಸಾಧ್ಯವಿಲ್ಲ. ಅಂತದ್ದರಲ್ಲಿ ಬಲಗೈ ಸ್ವಾಧೀನವಿಲ್ಲದ ಒಬ್ಬ ಹುಡುಗ ರಚಿಸುವ ಕಲಾಕೃತಿಗಳನ್ನು ನೋಡಿದವರು ನಿಬ್ಬೆರಗಾಗುವುದು ಸತ್ಯ. ಅದು ಆತ ಬಿಡಿಸುವ ಜಲವರ್ಣ ಚಿತ್ರ, ಪೆನ್ಸಿಲ್ ಡ್ರಾಯಿಂಗ್ ಅಥವಾ ಚುಕ್ಕಿ ಚಿತ್ರವೇ ಇರಬಹುದು. ಅವುಗಳ ನಿಖರತೆಯನ್ನು ನೋಡಿದಾಗ ಅತನ ಕಲಾ ಪ್ರೌಢಿಮೆ ಏನು ಎನ್ನುವುದು ತಿಳಿಯುತ್ತದೆ.
ಆತ ವಿಟ್ಲದ ಮುರಳೀಧರ. ಹುಟ್ಟುವಾಗಲೇ ಬಲಗೈ ಊನ. ಸಣ್ಣವನಿದ್ದಾಗಿನಿಂದಲೂ ಈತನಿಗೆ ಚಿತ್ರಗಳನ್ನು ನೋಡುವುದೆಂದರೆ ಪಂಚಪ್ರಾಣ. 1985ರ ಅ. 10 ರಂದು ಜನಿಸಿದ ಈತ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾನೆ. ಆತ ಸ್ವತಃ ಕಲಾವಿದನಾದ ರೋಚಕ ಕಥೆ. 9ನೇ ತರಗತಿಯಲ್ಲಿ ಒಮ್ಮೆ ಅನುತ್ತೀರ್ಣನಾಗುತ್ತಾನೆ. ಮನೆಯಲ್ಲಿ ಕೂತಿದ್ದಾಗ ಗೋಡೆಯಲ್ಲಿದ್ದ ಕ್ಯಾಲೆಂಡರ್‌ನ ಚಿತ್ರಗಳನ್ನು ನೋಡಿ ಹಾಗೆಯೇ ಬಿಡಿಸುವ ಪ್ರಯತ್ನ ಮಾಡುತ್ತಾನೆ. ಅದರಲ್ಲಿ ಸೋಲುತ್ತಾನೆ. ತನ್ನ ಬಲಗೈಯನ್ನು ಲೆಕ್ಕಿಸದೆ ಹಠದಿಂದ ಎಡಗೈ ಉಪಯೋಗಿಸಿಕೊಂಡು ಚಿತ್ರ ಬಿಡಿಸುವ ಹಠಕ್ಕೆ ಬೀಳುತ್ತಾನೆ. ಸತತ ಪ್ರಯತ್ನದ ಬಳಿಕ ಅದರಲ್ಲಿ ಗೆಲ್ಲುತ್ತಾನೆ. ಇದಕ್ಕೆ ಊರಿನ ಕಲಾವಿದರೂ ಪ್ರೋತ್ಸಾಹಿಸುತ್ತಾರೆ. ದಿನ ಕಳೆದಂತೆ ಮುರಳಿ, ಚಿತ್ರಕಲೆಯ ಒಂದೊಂದೇ ಮಜಲುಗಳನ್ನು ತಿಳಿದುಕೊಳ್ಳುತ್ತಾನೆ. ಈ ಎಲ್ಲದರ ಮಧ್ಯೆ ವಿಟ್ಲದ ಖ್ಯಾತ ಚುಕ್ಕಿ ಚಿತ್ರ ಕಲಾವಿದ ಸೂರ್ಯ ಆಚಾರ್ ಅವರ ಚಿತ್ರಗಳನ್ನು ನೋಡಿ ಪ್ರಭಾವಿತನಾಗಿ ತಾನೂ ಚುಕ್ಕಿ ಹಾಕಲು ಪ್ರಾರಂಭಿಸುತ್ತಾನೆ.
ಚುಕ್ಕಿ ಚಿತ್ರ ಬಿಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತಾಳ್ಮೆ, ಸತತ ಪರಿಶ್ರಮ ಬೇಕು. ಒಂದು ಚಿತ್ರ ಬಿಡಿಸಲು ಎರಡು ವಾರ ತೆಗೆದುಕೊಳ್ಳುತ್ತಾನೆ. ಮೊದಲು ಪೆನ್ಸಿಲ್‌ನಲ್ಲಿ ಮುಖ್ಯ ರೇಖೆಗಳನ್ನು ಎಳೆದುಕೊಂಡು ತದನಂತರ ಜೆಲ್ ಕಪ್ಪು ಶಾಯಿ ಪೆನ್ ಉಪಯೋಗಿಸಿ ಚುಕ್ಕೆಗಳನ್ನು ಇಡುತ್ತಾ ಚಿತ್ರವನ್ನು ಪೂರ್ತಿಗೊಳಿಸುತ್ತಾನೆ. ದಿನಕ್ಕೆ ಎರಡು ಗಂಟೆ ಚುಕ್ಕಿ ಚಿತ್ರಕ್ಕಾಗಿಯೇ ಮೀಸಲಿಟ್ಟಿದ್ದಾನೆ. ಈ ಎಲ್ಲವನ್ನು ಮೈಗೂಡಿಸಿಕೊಂಡು ಹಂತಹಂತವಾಗಿ ಕಲಿತ ಮುರಳೀಧರ ಎಲ್ಲರ ಹೊಗಳಿಕೆಗೂ ಪಾತ್ರವಾಗಿದ್ದಾನೆ.
ಹತ್ತಾರು ಚಿತ್ರಗಳು ಮುರಳಿಯ ಕೈ ಚಳಕದಿಂದ ಮೂಡಿ ಬಂದಿವೆ. ಈತ ರಚಿಸಿದ ಕೆಲವೊಂದು ಚಿತ್ರಗಳು ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ತನ್ನ ಚಿತ್ರಕಲೆಯ ಹಿಂದೆ ತಂದೆ ಬಿ. ಭಾಸ್ಕರ ಶೆಟ್ಟಿ, ತಾಯಿ ಉದಯಕುಮಾರಿ ಪ್ರೋತ್ಸಾಹ ಇದೆ ಎನ್ನುತ್ತಾನೆ ಮುರಳೀಧರ. ಇತ್ತೀಚೆಗೆ ಕಂಪ್ಯೂಟರ್‌ನಲ್ಲಿ ಫೊಟೋಶಾಪ್, ಪೇಜ್‌ಮೇಕರ್, ಕೋರಲ್ ಡ್ರಾ ಕಲಿತಿದ್ದಾನೆ. ಶಾಲೆಗಳಿಗೆ ಚಾರ್ಟ್‌ಗಳನ್ನು ಮಾಡಿಕೊಡುತ್ತಾನೆ. ಸಂಪರ್ಕ: 9845089426 .

- ಉದಯ್ ವಿಟ್ಲ
udayvitla@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com